ಬೆಂಗಳೂರು: ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ವಿಚಾರಗಳು ಪಠ್ಯಪುಸ್ತಕದಲ್ಲಿ ಇರಬಾರದು, ಆ ಬಗ್ಗೆ ಪರಿಷ್ಕರಣಾ ಸಮಿತಿ ಸದಸ್ಯರು ಹೆಚ್ಚಿನ ಎಚ್ಚರವಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಾಕೀತು ಮಾಡಿದ್ದಾರೆ. ಮಕ್ಕಳಲ್ಲಿ ದ್ವೇಷ ಹುಟ್ಟಿಸುವಂತಹ ವಿಚಾರಗಳನ್ನು ಯಾವುದೇ ಕಾರಣಕ್ಕೂ ಪಠ್ಯದಲ್ಲಿ ಸೇರಿಸಬಾರದು.
ಇದರ ಜತೆಗೆ ಸಂವಿಧಾನದ ಆಶಯಗಳನ್ನು ಕಾಪಾಡುವುದು ಎಲ್ಲರ ಧರ್ಮ. ಪಠ್ಯವಸ್ತು ಪರಿಷ್ಕರಣಾ ಸಮಿತಿಯು ಈ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಕೆಲಸಮಾ ಡಬೇಕು. ಮುಂದಿನ ಜೂನ್ ಒಳಗೆ ಪರಿಷ್ಕರಣೆ ಮುಗಿಸಿ ಇಲಾಖೆಯ ಕೈಗೆ ವರದಿ ಸಲ್ಲಿಸಬೇಕು ಎಂದು ನಗರದ ಶಿಕ್ಷಕರ ಸದನದಲ್ಲಿ ಗುರುವಾರ ನಡೆದ ಪಠ್ಯವಸ್ತು ಪರಿಷ್ಕರಣಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಸೂಚಿಸಿದರು.
ಆಗಸ್ಟ್ ನಲ್ಲಿ ಪುಸ್ತಕ ಮುದ್ರಣಕ್ಕೆ ಟೆಂಡರ್ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೂನ್ ಅಂತ್ಯದೊಳಗೆ ಅಂತಿಮ ವರದಿ ನೀಡಲೇಬೇಕು. ಅಷ್ಟರೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕು. 2016-17ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯದಲ್ಲಿ ಯಾವುದೇ ತಪ್ಪುಗಳಿರಬಾರದು.
ಯಾವುದೇ ವಿಚಾರ ಹೇಳುವುದಿದ್ದರೂ ಸರಿಯಾದ ಮಾಹಿತಿ ನೀಡಿ ಎಂದು ಸಮಿತಿ ಸದಸ್ಯರಿಗೆ ಸಚಿವರು ತಿಳಿಸಿದರು. ಕಳೆದ ಒಂದೂವರೆ ತಿಂಗಳಿಂದ 1ರಿಂದ 10ನೇ ತರಗತಿ ಪಠ್ಯಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅವನ್ನೆಲ್ಲ ಕ್ರೋಡೀಕರಿಸಿ ಸಮಿತಿ ಸದಸ್ಯರಿಗೆ ನೀಡಲಾಗುತ್ತಿದೆ. ಪ್ರತಿಯೊಂದು ದೂರಿನ ಬಗೆಗೂ ಚರ್ಚೆ ಮಾಡಿ ಸದಸ್ಯರು ಅಂತಿಮ ನಿರ್ಣಯಕ್ಕೆ ಬರುತ್ತಾರೆ. ಆಡಳಿತಾತ್ಮಕ ಸಮಸ್ಯೆಗಳಿದ್ದಲ್ಲಿ ಮತ್ತೊಮ್ಮೆ ಸಭೆ ಕರೆಯುತ್ತೇನೆ. ಇಲ್ಲವಾದಲ್ಲಿ ಸಮಿತಿ ಸದಸ್ಯರೇ ಕುಳಿತುಕೊಂಡು ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಕಿಮ್ಮನೆ ಹೇಳಿದರು.
ಶಿಕ್ಷಕರಿಗೆ ಸಮಯದ ಪಾಠ: ಪಠ್ಯವಸ್ತು ಪರಿಷ್ಕರಣಾ ಸಮಿತಿಯ ಪೂರ್ವಭಾವಿ ಸಮಿತಿಯ ಸಭೆಯನ್ನು ಬೆಳಗ್ಗೆ 10.15ಕ್ಕೆ ಸಚಿವರು ಕರೆದಿದ್ದರು.
ಸಚಿವರು ನಿಗದಿತ ಸಮಯಕ್ಕೆ ಬಂದಿದ್ದರು. ಆದರೆ ಸಮಿತಿ ಸದಸ್ಯರು 11 ಗಂಟೆಯಾದರೂ ಒಬ್ಬರಾದ ಮೇಲೆ ಒಬ್ಬರು ಆಗಮಿಸುತ್ತಿದ್ದರು. ಸಚಿವರು ಭಾಷಣ ಮಾಡುವಾಗಲೂ ಕೆಲವರು ಸಭೆಗೆ ಬಂದರು. ಇದರಿಂದ ಬೇಸರಗೊಂಡ ಸಚಿವರು, `ಮಕ್ಕಳಿಗೆ ನೀವು ಆದರ್ಶರಾಗಿದ್ದೀರಿ. ಮಕ್ಕಳಿಗೆ ಪಾಠ ಮಾಡುವವರಾದರೂ ಸಮಯ ಪಾಲನೆ ಮಾಡಬೇಕು. ಈ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ನಡೆಸುತ್ತಿಲ್ಲ' ಎಂದು ಕಿಡಿ ಕಾರಿದರು.