ಬೆಳಗಾವಿ/ಗೋಕಾಕ: ರಾಜಿನಾಮೆ ಹಿಂಪಡೆ ಯುವಂತೆ ಸತೀಶ ಜಾರಕಿಹೊಳಿ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನಡೆಸಿದ ಪ್ರಯತ್ನಗಳು ಫಲ ನೀಡಿಲ್ಲ. ಒಂದೆಡೆ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ . ಇನ್ನೊಂದೆಡೆ ಜಾರಕಿಹೊಳಿ ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರದ ಬೆಳವಣಿಗೆ ಎಂದರೆ ರಾಜಿನಾಮೆ ವಿಚಾರವಾಗಿ ಸಿಎಂ ಜತೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದಿದ್ದ ಜಾರಕಿಹೊಳಿ, ಮಾತುಕತೆಗೆ ಒಪ್ಪಿದ್ದಾರೆ. ಆದರೆ ಅದು ಮುಂದಿನ ರಾಜಕೀಯ ನಡೆ ನಿರ್ಧಾರಕ್ಕೆ ಸೀಮಿತ ಎಂದೂ ಹೇಳಿದ್ದಾರೆ.
ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಸಲಹೆಗಾರ ಕೆಂಪಯ್ಯ ಅವರು ಬೆಳ್ಳಂಬೆಳಗ್ಗೆ ಗೋಕಾಕದಲ್ಲಿರುವ ಸಚಿವರ ನಿವಾಸ `ಹಿಲ್ ಗಾರ್ಡನ್'ಗೆ ಸಂಧಾನಕಾರರಾಗಿ ತೆರಳಿದರು. ಕೆಂಪಯ್ಯ ಆಗಮನದಿಂದ ಕೆಂಡಾಮಂಡಲರಾದ ಜಾರಕಿಹೊಳಿ, `ಸಂಧಾನ ಮಾಡಲು ನೀವು ಯಾರು? ಪಕ್ಷದ ಹೈಕಮಾಂಡಾ? ಮುಖ್ಯಮಂತ್ರಿಗಳಾ? ಪಕ್ಷದ ಅಧ್ಯಕ್ಷರಾ? ವಕ್ತಾರರಾ? ಏನೆಂದು ನೀವು ಬಂದಿದ್ದೀರಿ' ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. `ಇದು ನನ್ನ ವೈಯಕ್ತಿಕ ಸಮಸ್ಯೆ. ಹಾಗಾಗಿ ನೀವು ಬಂದಿರುವುದು ಸರಿಯಲ್ಲ' ಎಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಯ್ಯ, `ಮುಖ್ಯಮಂತ್ರಿಗಳ ಆದೇಶದಂತೆ ನಾನು ಬಂದಿದ್ದೇನೆ. ಸಚಿವರು ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸಲಿದ್ದಾರೆ. ಗುರುವಾರ ಒಳ್ಳೆಯ ಬೆಳವಣಿಗೆಯಾಗಲಿದೆ' ಎಂದಷ್ಟೇ ತಿಳಿಸಿದರು.
ಶಾಸಕರ ಒತ್ತಡ: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ಸುಮಾರು ಐದು ಗಂಟೆ ಕಾಲ ಪಕ್ಷದ ಶಾಸಕರು, ಜಿಲ್ಲಾ ಕಾಂಗ್ರೆಸ್ ನಾಯಕರ ಜತೆಗೆ ಜಾರಕಿಹೊಳಿ ಸುದೀರ್ಘ ಸಮಾಲೋಚನೆ ನಡೆಸಿದರು. `ಜಿಲ್ಲೆಯ ಶಾಸಕರು, ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನನ್ನ ನಿರ್ಧಾರ ಅಚಲ. ಮುಂದಿನ ರಾಜಕೀಯ ನಡೆ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ. ನನ್ನ ರಾಜಿನಾಮೆ ಪ್ರಕರಣದಿಂದ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಅವರಿಗೆ ಮುಜುಗರ ಆಗಬಾರದು.
ಈಗ ಖಾತೆ ಬದಲಾವಣೆ ಪ್ರಶ್ನೆಯೇ ಇಲ್ಲ. ಸಮಾಜ ಸಂಘಟನೆ, ಸಮಾಜ ಸೇವೆ ಮಾಡಲು ಅವಕಾಶ ದೊರೆಯುತ್ತಿಲ್ಲ. ನನಗೆ ಕೆಲಸ ಮಾಡಲು ಹೆಚ್ಚಿನ ಅವಕಾಶ ಬೇಕು. ಹಾಗಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ನನ್ನ ರಾಜಿನಾಮೆ ಹಿಂದೆ ಬೇರಾವುದೇ ಸಮಸ್ಯೆ ಇಲ್ಲ ' ಎಂದು ಸಭೆ ಬಳಿಕ ಸತೀಶ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.
`ರಾಜಿನಾಮೆ ನಂತರ ಮುಖ್ಯಮಂತ್ರಿ ಸಿದ್ದರಾಮ ಯ್ಯ, ಸಚಿವರಾದ ಡಿ.ಕೆ. ಶಿವಕುಮಾರ ಮತ್ತು ಎಚ್.ಸಿ. ಮಹಾದೇವಪ್ಪ ಅವರು ದೂರವಾಣಿ ಮೂಲಕ ತಮ್ಮೊಂದಿಗೆ ಮಾತನಾಡಿದ್ದಾರೆ. ನನ್ನ 20 ತಿಂಗಳ ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು, ಯಾರೂ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಬಕಾರಿ ಇಲಾಖೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ' ಎಂದರು.
ಸಚಿವರನ್ನು ಭೇಟಿಯಾದ ಡಿಸಿ: ಸಚಿವ ಸತೀಶ ಜಾರಕಿಹೊಳಿ ಅವರು ಗುಪ್ತಸಭೆ ನಡೆಸುತ್ತಿದ್ದ ವೇಳೆ ಜಿಲ್ಲಾಧಿ ಕಾರಿ ಎನ್ ಜಯರಾಂ ಅವರು ಭೇಟಿಯಾದರು. ಆದರೆ,
ಏನು ಚರ್ಚೆ ಮಾಡಿದ್ದಾರೆ ಎಂಬುದು ನಿಗೂಢವಾಗಿದೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾ„ಕಾರಿ, ಕೆಡಿಪಿ ಸಭೆ ನಡೆಸುವ ಸಂಬಂಧ ಸಚಿವರನ್ನು
ಭೇಟಿಯಾಗಿದ್ದು, ಸಚಿವರು ಸಭೆಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಆದರೆ, ಸಚಿವರನ್ನು ಭೇಟಿಯಾಗಲು ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಕಾರ್ಯಕರ್ತರಿಗೆ ನಿಷೇಧಿಸಲಾಗಿತ್ತು. ಇದು ಖಾಸಗಿ ಕಾರ್ಯಕ್ರಮ. ಹಾಗಾಗಿ, ಇಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ ಎನ್ನಲಾಗುತ್ತಿತ್ತು.
ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ಅವರು ಒಳ್ಳೆ ಸ್ನೇಹಿತರು. ಅವರ ಸಂಬಂಧ ಇಪ್ಪತ್ತು ವರ್ಷಗಳಷ್ಟು ಹಳೆಯದು. ಅವರಿಬ್ಬರೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಅವರಿಬ್ಬರ ಮಧ್ಯೆ ಏನೂ ಮನಸ್ತಾಪವಿಲ್ಲ.
- ಮಲ್ಲಿಕಾರ್ಜುನ ಖರ್ಗೆ
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ
ಸಿಎಂ ವಿಶ್ವಾಸ
ಮಂಡ್ಯ: ಸತೀಶ್ ಜಾರಕಿಹೊಳಿ ರಾಜಿ ನಾಮೆ ವಾಪಸ್ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಜಾರಕಿಹೊಳಿ ಜತೆ ಮಾತುಕತೆ ನಡೆಸಿದ್ದು, ಬೆಂಗಳೂರಿಗೆ ಆಗಮಿಸಿ ರಾಜಿನಾಮೆ ವಾಪಸ್ ಪಡೆಯಲಿದ್ದಾರೆ. ಅವರ ಸಂಬಂಧಿ ಮಂಜುನಾಥ್ ವರ್ಗಾವಣೆಯಿಂದ ಬೇಸರ ಮಾಡಿ ಕೊಂಡಿದ್ದಾರೆ ಎಂಬುದು ಸುಳ್ಳು. ಸಮಾಜ ಸೇವೆಯಲ್ಲಿ ಇನ್ನಷ್ಟು ಸಕ್ರಿಯರಾಗಿ ತೊಡಗುವ ಉದ್ದೇಶವನ್ನು ಹೊರಹಾಕಿದ್ದಾರಷ್ಟೆ. ಇನ್ನೂ ಐವರು ಸಚಿವರು ರಾಜಿನಾಮೆ ಕೊಡಲು ಮುಂದಾಗಿದ್ದಾರೆ ಎಂಬುದು ಶುದ್ಧ ಸುಳ್ಳು. ಸಂಪುಟ ಸದಸ್ಯರ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.