ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸದಿದ್ದರೆ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಲೋಕಾಯುಕ್ತ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ನೀಡುತ್ತಿರುವ ವರದಿ ಮತ್ತು ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಹಾಗೆಯೇ ವಿಧಾನಮಂಡಲ ಅಧಿವೇಶನದಲ್ಲಿ ನಡೆಯುತ್ತಿರುವ ಚರ್ಚೆಗಳನ್ನೂ ನೋಡುತ್ತಿದ್ದೇನೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಪಕ್ಷದವರಾದ ಜಗದೀಶ್ ಶೆಟ್ಟರ್ ಮತ್ತು ಎಚ್.ಡಿ. ಕುಮಾರಸ್ವಾಮಿ ವಾದ ಮಂಡಿಸಿದ್ದಾರೆ. ಆದರೆ, ಸರ್ಕಾರ ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದೆ. ಇದು ಸರಿಯಲ್ಲ. ಸಿಬಿಐ ಅಲ್ಲದೆ ಇದಕ್ಕೆ ಬೇರೆ ಪರಿಹಾರವಿಲ್ಲ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎಸ್‍ಐಟಿ ತನಿಖೆ ಸೂಕ್ತವಲ್ಲ:
ಸಿಬಿಐ ತನಿಖೆ ನಡೆಸಬೇಕೆನ್ನುವುದು ಜೆಡಿಎಸ್‍ನ ನಿಲುವು. ಒಂದು ವೇಳೆ ಇದಕ್ಕೆ ಸರ್ಕಾರ ಒಪ್ಪದಿದ್ದರೆ, ಕುಮಾರಸ್ವಾಮಿ ಅವರು ಹೋರಾಟ ಮುಂದುವರಿಸುತ್ತಾರೆ. ಅಷ್ಟಕ್ಕೂ ಸರ್ಕಾರ ಈ ಪ್ರಕರಣವನ್ನು ಎಸ್‍ಐಟಿಯಿಂದ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಇದರಿಂದ ಏನು ನಿರೀಕ್ಷಿಸಲು ಸಾಧ್ಯ? ಇದೊಂದು ಸರ್ಕಾರದ ಸಂಸ್ಥೆಯಾಗಿದ್ದು, ಇರುವ ತನಿಖೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿದಂತಾಗುತ್ತದೆ, ಅಷ್ಟೆ. ಆದ್ದರಿಂದ ಸರ್ಕಾರ ತನ್ನ ವ್ಯಾಪ್ತಿಗಿಂತ ಹೊರಗಿನ ಅಂದರೆ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಅವರು ವಿವರಿಸಿದರು.
ನ್ಯಾ. ಸಂತೋಷ್ ಹೆಗ್ಡೆ ಸಲಹೆ ಪರಿಗಣಿಸಿ: ನಾನು ನ್ಯಾ. ಭಾಸ್ಕರ್ ರಾವ್ ಅವರನ್ನು ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ. ಸರ್ಕಾರ ಭ್ರಷ್ಟಾಚಾರ ಪ್ರಕರಣವನ್ನು ಎಸ್ ಐಟಿಗೆ ವಹಿಸಿರುವುದನ್ನ ಟೀಕಿಸುವುದೂ ಇಲ್ಲ. ಇನ್ನೂ ಈ ಬಗ್ಗೆ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದಕ್ಕೂ ಹೋಗುವುದಿಲ್ಲ. ಆದರೆ, ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ನ್ಯಾ.ಭಾಸ್ಕರ್ ರಾಜೀನಾಮೆ ನೀಡಲಿ. ಇಲ್ಲವೇ ರಜೆ ಮೇಲೆ ಹೋಗಲಿ ಎಂದಿದ್ದಾರೆ. ಅದನ್ನು ಎಲ್ಲರಿಗೂ ನೆನಪಿಸುವ ಪ್ರಯತ್ನ ಮಾಡುತ್ತೇನೆ.
ಏಕೆಂದರೆ ಸಂತೋಷ್ ಹೆಗ್ಡೆ ಅವರಿದ್ದಾಗ ಲೋಕಾಯುಕ್ತ ಘನತೆ ಹೆಚ್ಚಾಗಿತ್ತು. ಆದ್ದರಿಂದ ಅವರು ಸಂಸ್ಥೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದವರು, ಸುಪ್ರೀಂ ಕೋರ್ಟ್‍ನಲ್ಲೂ ಇದ್ದರು. ನಂತರ ಅವರು ಕಾಶ್ಮಿರ ಲೋಕಾಯುಕ್ತರಾಗಿದ್ದವರು. ಅವರ ಪುತ್ರನ ವಿರುದ್ಧ ಆಪಾದನೆ ಬಂದಾಗ ಅವರು ತಕ್ಷಣ ರಾಜೀನಾಮೆ ಸಲ್ಲಿಸಿದ್ದರು. ಪುತ್ರನ ವಿರುದ್ಧ ಕೇಸು ದಾಖಲಿಸಿದ್ದರು. ಇಂಥ ಉದಾಹರಣೆಯೂ ಇದೆ. ಆದ್ದರಿಂದ ರಾಜೀನಾಮೆಗೆ ಒತ್ತಾಯಿಸುವುದಿಲ್ಲ. ಲೋಕಾಯುಕ್ತರು ರಾಜೀನಾಮೆ ನೀಡಬಾರದು ಎನ್ನುವವರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ದೇವೇಗೌಡರು ಮಾರ್ಮಿಕವಾಗಿ ಮಾತನಾಡಿದರು.
ಹಣ ಚಲಾವಣೆ ಎಷ್ಟಾಗಿದೆ?:
ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ಬಯಲಾದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳು ಲೋಕಾಯುಕ್ತರನ್ನೇ ಏಕೆ ಭೇಟಿ ಮಾಡಿದ್ದಾರೆ. ಅದರ ಅಗತ್ಯವೇನಿತ್ತು ಎಂದು ದೇವೇಗೌಡ ಪ್ರಶ್ನಿಸಿದ್ದಾರೆ. ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿ ಸೋನಿಯಾ ನಾರಂಗ್ ಪತ್ರ ಬರೆದ ನಂತರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತರನ್ನು ಏಕೆ ಭೇಟಿ ಮÁಡಿದರು? ಆ ಸಂದರ್ಭದಲ್ಲಿ ಆಗಿರುವ ಒಡಂಬಡಿಕೆಗಳೇನು? ಎಷ್ಟು ಹಣ ಚಲಾವಣೆಯಾಗಿದೆ ಎಂದು ಅವರು ಪ್ರಶ್ನಿಸಿದರು.
ಈ ಮಾಹಿತಿಯನ್ನು ಕುಮಾರಸ್ವಾಮಿ ವಿಧಾನಸಭಾ ಸ್ವೀಕರ್ಗೆ ನೀಡುವುದಾಗಿ ಹೇಳಿದ್ದರು. ಆದರೆ, ಅದಕ್ಕೆ ನಾನು ಆಕ್ಷೇಪಿಸಿದೆ. ಸ್ಪೀಕರ್‍ಗೆ ಏಕೆ ಕೊಡಬೇಕು? ಈಗಾಗಲೇ ನೈಸ್ ಅಕ್ರಮದ ಬಗ್ಗೆ ಸ್ಪೀಕರ್‍ಗೆ ಮಾಹಿತಿ ನೀಡಿದ್ದರಿಂದ ಏನೂ ಆಗಿಲ್ಲ. ಆದ್ದರಿಂದ ಈಗಲೂ ಏನೂ ಆಗುವುದಿಲ್ಲ. ಹೆಚ್ಚೆಂದರೆ, ಒಂದು ಸದನ ಸಮಿತಿ ರಚಿಸಬಹುದು. ಅದೂ ಎಲ್ಲರೂ ಒಪ್ಪಿದರೆ ಮಾತ್ರ ಎಂದು ದೇವೇಗೌಡ ಜರಿದರು.
ಪರಿಷತ್ ವಿಸರ್ಜನೆಗೆ ಪ್ರತಿಕ್ರಿಯೆ:
ವಿಧಾನಪರಿಷತ್ ವಿಸರ್ಜನೆ ಮಾಡಬೇಕೆಂದು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಸದನದಲ್ಲಿ ಪ್ರಸ್ತಾಪಿಸಿದ್ದರೆ ಅದು ಅವರ ವ್ಯಯುಕ್ತಿಕ ಅಭಿಪ್ರಾಯ ಎಂದು ದೇವೇಗೌಡ ಪ್ರತಿಕ್ರಿಯಿಸಿದರು. ಕೃಷ್ಣಪ್ಪ ತಮ್ಮದೇ ನಿಲುವಿನಲ್ಲಿ ಹೇಳಿಕೆ ನೀಡಿದ್ದಾರೆ. ಅದು ಪಕ್ಷದ ನಿಲುವಲ್ಲ. ಪರಿಷತ್ತಿಗೆ ಎಂಥ ಹಿನ್ನೆಲೆಯವರನ್ನು ನೇಮಕ ಮಾಡಬೇಕೆಂದು ನೀತಿ, ನಿಯಮಗಳಿವೆ. ಆದರೆ, ಇತ್ತೀಚಿಗೆ ಸರ್ಕಾರಗಳು ಪರಿಷತ್ತಿಗೆ ಮಾಡುತ್ತಿರುವ ನೇಮಕಗಳು ಸರಿಯಾಗಿಲ್ಲ. ಇದು ಒಂದು ಸರ್ಕಾರದ ಕಥೆಯಲ್ಲ, ಈ ಕೆಲಸವನ್ನು ಎಲ್ಲಾ ಸರ್ಕಾರಗಳೂ ಮಾಡುತ್ತಿವೆ. ಆದ್ದರಿಂದ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ 180 ಶಾಸಕರ ಬೆಂಬಲವಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಕಾಂಗ್ರೆಸ್ ಏನೇನೂ ಇಲ್ಲ. ಈ ಸರ್ಕಾರದಲ್ಲಿ ಯಾರಾದರೂ ಮಾತನಾಡುವವರಿದ್ದಾರೆ ಎಂದರೆ ಅವರೆಲ್ಲಾ ನಮ್ಮವರೆ. ಅಂದರೆ ಅವರೆಲ್ಲಾ ದಳದಲ್ಲಿದ್ದು ಅಲ್ಲಿಗೆ ಹೋದವರು. ಅವರೇನೂ ಮೂಲ ಕಾಂಗ್ರೆಸಿಗರಲ್ಲ. ಆದ್ದರಿಂದ ಅವರು ಚೆನ್ನಾಗಿ ವಾದ, ವಿವಾದ ಮಾಡುತ್ತಿದ್ದಾರೆ.
-ಎಚ್.ಡಿ. ದೇವೇಗೌಡ,
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ