ಬೆಂಗಳೂರು: ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಅವರನ್ನು ಬಂಧಿಸದಂತೆ ಹೈಕೋರ್ಟ್ ಲೋಕಾಯುಕ್ತಗೆ ಸೂಚಿಸಿದೆ.
ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರು ದುರುದ್ದೇಶದಿಂದ ಕೂಡಿದ್ದು, ಅದನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ. ಎ.ಎನ್.ವೇಣು ಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆವರೆಗೂ ಬಂಧಿಸಬಾರದು ಮತ್ತು ಈ ಕುರಿತು ಲೋಕಾಯುಕ್ತ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು 15 ದಿನಗಳ ಕಾಲ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ ಮೇಲೆ ಅದರ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ಆದರೆ, ಲೋಕಾಯುಕ್ತ ಆ ನಿಯಮ ಪಾಲಿಸದೆ ಲೋಕಾಯುಕ್ತ ಪೊಲೀಸರಿಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದೆ. ಅಲ್ಲದೇ ಸಿಎಜಿ ವರದಿ ಆಧರಿಸಿ ದಾಖಲಾಗಿರುವ ಈ ಪ್ರಕರಣದಲ್ಲಿ ಲೋಕಾಯುಕ್ತರು ಸಿಐಡಿ ಸಂಸ್ಥೆಯ ಸಹಾಯ ಪಡೆದಿದ್ದಾರೆ.
ಸಿಐಡಿ ಸಂಸ್ಥೆ ತನ್ನ ವರದಿ ನೀಡುವ ಮುನ್ನವೇ ಎಫ್ಐಆರ್ ದಾಖಲಿಸುವಂತೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ. ಲೋಕಾಯುಕ್ತ ಸಂಸ್ಥೆ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಸಿಆರ್‍ಪಿಸಿ ಅನ್ವಯ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸುವ ಅಧಿಕಾರ ಲೋಕಾಯುಕ್ತ ಇಲಾಖೆಗೆ ಇಲ್ಲ. ಅಲ್ಲದೇ ಸಿಎಜಿ ವರದಿ ಸಂಪೂರ್ಣ ಸದನಕ್ಕೆ ಸಂಬಂಧಿಸಿದ ದಾಖಲೆ ಆಗಿದ್ದು, ಸಿಎಜಿ ವರದಿ ಅನ್ವಯ ಎಫ್ಐಆರ್ ದಾಖಲಿಸಬೇಕಾದರೆ ಸದನದ ಒಪ್ಪಿಗೆ ಪಡೆಯಬೇಕು. ಈ ಯಾವ ಕಾನೂನನ್ನು ಪಾಲಿಸದೇ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ. ಆದ್ದರಿಂದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಬೇಸಿಗೆ ಕಾಲ ಪೂರ್ಣಗೊಂಡಿದ್ದು, ಮಳೆಗಾಲ ಈಗಷ್ಟೇ ಆರಂಭವಾಗಿದೆ. ಅರ್ಜಿದಾರರ ವಿರುದಟಛಿ ಮತ್ತಷ್ಟು ಎಫ್ಐಆರ್ ದಾಖಲಾಗಿದ್ದು, ತನಿಖೆಗೆ ತಡೆಯಾಜ್ಞೆ ನೀಡಲು ಸಮಯ ಒದಗಿಬರಬೇಕಿದೆ 'ಎಂದು ಹೇಳಿತು. ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಕುರಿತು ತಮಗೆ ವಾದ ಮಂಡಿಸಲು ಜು.13ರವರೆಗೂ ಕಾಲಾವಕಾಶ ಕೋರಿದರು. ಇದನ್ನು ಅಲ್ಲಗೆಳೆದ ಪೀಠ, ಸಂವಿಧಾನ ಮತ್ತು ವ್ಯಕ್ತಿಯ ವೈಯಕ್ತಿಕ ಹಕ್ಕು ರಕ್ಷಣೆ ಮಾಡಬೇಕಾಗಿದ್ದು, ಮುಂದಿನ ವಿಚಾರಣೆಗೆ ಮುನ್ನವೇ ಅವರನ್ನ ಬಂಧಿಸಿದರೆ ಏನು ಮಾಡಬೇಕು?
ಜು. 13ರವರೆಗೇನು 'ಕಂಬ ಸುತ್ತಬೇಕೆ' ಎಂದು ಖಾರ ವಾಗಿ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಪರ ವಕೀಲರು, ಮುಂದಿನ ವಿಚಾರಣೆವರೆಗೂ ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಬಂಧಿಸುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಸಿ.ವಿ. ನಾಗೇಶ್ ಮತ್ತು ಸಂದೀಪ್ ಪಾಟೀಲ್ ವಾದ ಮಂಡಿಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಸಲ್ಲಿಸುವ ಟಿಪ್ಪಣಿ ಆಧಾರದ ಮೇಲೆ ಲೋಕಾಯುಕ್ತ ನ್ಯಾಯಾಲಯ `ಯಸ್' ಅಥವಾ `ನೋ'ಎಂದು ಆದೇಶಿಸುತ್ತದೆ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, `ಯಸ್' ಅಥವಾ `ನೋ' ಎನ್ನುವುದಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಏಕೆ ಬೇಕು ಎಂದು ಪೀಠ ಲೋಕಾಯುಕ್ತ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos