ವಿಧಾನಸಭೆ: `ಎಲ್ಲಿ, ಎಲ್ಲಂದ್ರೀ? ಅಲ್ಲಿಯೂ ನೀರಿನ ಕೊರತೆನಾ? ಇದೇನ್ರೀ ಇದು? ಅಲ್ಲೆಲ್ಲೋ ನಕ್ಸಲೈಟ್ ಬಂದಿದ್ದಾರ್ರಾ ನೋಡ್ರೀ' ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ವ್ಯಂಗ್ಯಭರಿತ
ಪ್ರಶ್ನೆ ಇದು. ಇದಕ್ಕೆ ಗುರಿಯಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್. ಏಕೆಂದರೆ, `ಗದಗ-ಬೆಟಗೇರಿಯಲ್ಲಿ ನೀರಿನ
ಕೊರತೆ ಇದೆ ಸಭಾಧ್ಯಕ್ಷರೇ... ಅಲ್ಲಿ 15 ದಿನಕ್ಕೊಮ್ಮೆ ನೀರು ಸಿಕ್ಕರೇ ಅದೇ ಪುಣ್ಯ. ಮೂರು ತಿಂಗಳಿನಿಂದ ಅಲ್ಲಿನ ಜನರು ನೀರಿಲ್ಲದೆ ತತ್ತರಿಸುತ್ತಿದ್ದಾರೆ...' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಶೂನ್ಯವೇಳೆ ಸದನದ ಗಮನ ಸೆಳೆದರು. ಆಗ, ಅಲ್ಲಿಯೂ ನೀರಿನ ಸಮಸ್ಯೆನಾ ಎಂದು ಸ್ಪೀಕರ್ ಉದ್ಗಾರ ತೆಗೆದರು. ಹೌದು, ಸಭಾಧ್ಯಕ್ಷರೆ. ಗದಗ-ಬೆಟಗೇರಿ ಅವಳಿ ನಗರ. ಮೂರು ತಿಂಗಳಿಂದ ಅಲ್ಲಿ ನೀರಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರ ಸ್ವಕ್ಷೇತ್ರ ಇದು. ಇಲ್ಲೇ ನೀರಿಲ್ಲ ಎಂದರೆ ಹೇಗೆ ಹೇಳಿ? ಈ ಸಮಸ್ಯೆ 3 ತಿಂಗಳಿನಿಂದ ಇದೆ. ಮೂರು ತಿಂಗಳಿನಿಂದ ವಿದ್ಯುತ್ ಇಲ್ಲವಂತೆ. ಡಂಬಲ್ ಪೈಪ್ ಹೌಸ್ ಬಳಿ ಪೈಪ್ ಸ್ಫೋಟಗೊಂಡಿದೆ. ನೀರು ಇಲ್ಲದೆ ಜನ ಪರಿತಪಿಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ್, ಹೌದು ಸಭಾಧ್ಯಕ್ಷರೆ 3 ತಿಂಗಳಿನಿಂದ ವಿದ್ಯುತ್ ಇಲ್ಲ. ಪೈಪ್ ಸ್ಫೋಟಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಜನಕ್ಕೆ ಸಮಾಧಾನ ಇಲ್ಲ. 30 ವರ್ಷದ ಹಿಂದಿನ ಯೋಜನೆ ಇದು. ದುರಸ್ತಿ ಕಾರ್ಯಗಳು ನಡೆಯಬೇಕಿವೆ. ರಾಜ್ಯ ನಗರ ಜಲಮಂಡಳಿ ಅಧ್ಯಕ್ಷರಿಗೆ ಸೂಚನೆ ನೀಡಿ ರಿಪೇರಿ ಕಾಮಗಾರಿಯನ್ನು ತ್ವರಿತವಾಗಿ ಮಾಡಲು ತಿಳಿಸಲಾಗಿದೆ. ತೊಂದರೆ ಇರುವುದಂತೂ ಸತ್ಯ. 2ನೇ ಹಂತದ ಯೋಜನೆ ಇನ್ನು 4 ತಿಂಗಳಲ್ಲಿ ಮುಗಿಯಲಿದೆ ಎಂದು ಉತ್ತರಿಸಿದರು.