ಸಿದ್ದರಾಮಯ್ಯ 
ರಾಜಕೀಯ

ಪ್ರತಿ ವರ್ಷ ರೂ 3 ಸಾವಿರ ಕೋಟಿ ವೆಚ್ಚ: ಸಿಎಂ ಸಿದ್ದರಾಮಯ್ಯ ಭರವಸೆ

ರಾದೇಶಿಕ ಅಸಮಾನತೆ ನಿವಾರಿಸಲು ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನವನ್ನು ಮುಂದಿನ ಐದು ವರ್ಷವೂ...

ವಿಧಾನಸಭೆ: ಪ್ರಾದೇಶಿಕ ಅಸಮಾನತೆ ನಿವಾರಿಸಲು ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನವನ್ನು ಮುಂದಿನ ಐದು ವರ್ಷವೂ ಮುಂದುವರಿಸಲಿದ್ದು, ಪ್ರತಿ ವರ್ಷ ರೂ.3000 ಕೋಟಿ ವೆಚ್ಚ ಮಾಡಲಾಗುತ್ತದೆ. ಅಲ್ಲದೆ, ಹೈದರಾಬಾದ್ -ಕರ್ನಾಟಕ ಭಾಗದ ಅಭಿವೃದ್ಧಿಗೆ ರೂಪಿಸಲಾಗಿರುವ ಕ್ರಿಯಾ ಯೋಜನೆಯಂತೆ ಕಾಮಗಾರಿಗಳನ್ನು ತ್ವರಿತಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಈ ಆರ್ಥಿಕ ವರ್ಷದಲ್ಲಿಯೂ ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಹಣ ನೀಡಲಾಗಿದೆ. ಇದೂ ಸೇರಿದಂತೆ ಐದು ವರ್ಷ ಮುಂದುವರಿಯಲಿದೆ. ಜತೆಗೆ 371 (ಜೆ) ಅನ್ವಯ ಹೈ-ಕ ಕ್ಕೆ ಬಿಡುಗಡೆ ಮಾಡಿದ ಅನುದಾನವನ್ನು ಸೂಕ್ತವಾಗಿ ಬಳಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಲಾಗಿದ್ದು, ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿ ವರದಿಯನ್ನು ನೀಡಲಿದೆ ಎಂದರು. ಡಾ.ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ 371 (ಜೆ) ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆದ ಸುಮಾರು 586 ನಿಮಿಷದ ಸುದೀರ್ಘ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಸುಮಾರು ಮೂರು ಗಂಟೆ ಕಾಲ ಉತ್ತರಿಸಿದರು.

ನಂಜುಂಡಪ್ಪ ವರದಿ ಅನುಷ್ಠಾನದ ಕಾರ್ಯಕ್ರಮ 8 ವರ್ಷದ್ದಾಗಿತ್ತು. ಅವರು 2003ರಲ್ಲಿ ವರದಿ ನೀಡಿದ್ದರೂ 2007-08ರಲ್ಲಿ ಅನುಷ್ಠಾನ ಆರಂಭವಾಯಿತು. ಈವರೆಗೆ ರೂ. 20,138.64 ಕೋಟಿ ಒದಗಿಸಲಾಗಿದ್ದು, ಈ ಪೈಕಿ 14,635 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಶೇ.95ರಷ್ಟು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 371(ಜೆ) ಅನ್ವಯ ಹೈಕ ಅಭಿವೃದ್ಧಿ ಮಂಡಳಿಗೆ 2013-14ನೇ ಸಾಲಿನಲ್ಲಿ 774 ಕಾರ್ಯಕ್ರಮಗಳಿಗಾಗಿ ರೂ.150 ಕೋಟಿ ನಿಗದಿಪಡಿಸಿ ರೂ. 30 ಕೋಟಿ ಬಿಡುಗಡೆ ಮಾಡಲಾಗಿದೆ. 2014-15 ರಲ್ಲಿ 2140 ಕಾರ್ಯಕ್ರಮಗಳಿಗೆ ರೂ.862 ಕೋಟಿ ನಿಗದಿಪಡಿಸಿ ರೂ. 600 ಕೋಟಿ ಬಿಡುಗಡೆ ಮಾಡಲಾಗಿದೆ. 2015-16 ರಲ್ಲಿ 2093 ಕಾರ್ಯಕ್ರಮಗಳಿಗೆ ರೂ. 1000 ಕೋಟಿ ನಿಗದಿಪಡಿಸಿ ರೂ.250 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ತಾಲೂಕು ರಚನೆಗೆ ಬದ್ಧ: ಬಿಜೆಪಿ ಅವಧಿಯಲ್ಲಿ ಘೋಷಿಸಲಾಗಿದ್ದ 44 ತಾಲೂಕು ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಈ ಪೈಕಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿದ್ದು, ಸಂಪನ್ಮೂಲ ಹೊಂದಿಸಿ ಆದ್ಯತೆ ಮೇರೆಗೆ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಜತೆಗೆ 11 ಉಪ ವಿಭಾಗ, 124 ಹೋಬಳಿ ರಚಿಸಲು ಉದ್ದೇಶಿಸಲಾಗಿದೆ. ನಾವು ತಾಲೂಕು ರಚನೆಯನ್ನು ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸಭಾತ್ಯಾಗ: ನಂಜುಂಡಪ್ಪ ವರದಿಯನ್ವಯ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಪರಿಣಾಮ ಕಾರಿಯಾಗಿ ಸ್ಪಂದಿಸಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಪ್ರತಿವರ್ಷ 5 ಸಾವಿರ ಕೋಟಿ ರೂ. ಕೊಡಬೇಕು ಎಂಬ ನಮ್ಮ ಬೇಡಿಕೆ ಈಡೇರಿಲ್ಲ. ಅಲ್ಲದೆ, ಕಳೆದ ಡಿಸೆಂಬರ್‍ನಲ್ಲಿ ನೀಡಿದ ಉತ್ತರವನ್ನೇ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ರಾಯಚೂರಿನಲ್ಲಿ ಐಐಟಿಗೆ ಒತ್ತಾಯ
ರಾಯಚೂರಿನಲ್ಲೇ ಐಐಟಿ ಸ್ಥಾಪನೆ ಮಾಡಬೇಕು. ರಾಜ್ಯ ಸರ್ಕಾರ ಒಂದೇ ನಗರದ ಪ್ರಸ್ತಾವನೆಯನ್ನು ಕಳುಹಿಸಬೇಕಿತ್ತು. ಈ ಬಗ್ಗೆ ಈಗಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪಕ್ಷಾತೀತವಾಗಿ ಒತ್ತಾಯಿಸಿದರು. ಮುಖ್ಯಮಂತ್ರಿಯವರು ಉತ್ತರ ನೀಡಿದ ನಂತರ ವಿಷಯ ಪ್ರಸ್ತಾಪಿಸಿದ ಜೆಡಿಎಸ್‍ನ ಶಿವರಾಜ ಪಾಟೀಲ್, ರಾಯಚೂರು ಒಂದು ಹೆಸರನ್ನು ಸರ್ಕಾರ ಕಳುಹಿಸಬೇಕಿತ್ತು. ನಂಜುಂಡಪ್ಪ ವರದಿಯನ್ನು ಅನುಷ್ಠಾನ ಮಾಡುತ್ತೇವೆ ಎಂದಾದರೆ ಅವರ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ರಾಯಚೂರಿನಲ್ಲೇ ಐಐಟಿ ಆಗಬೇಕು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿದಾಗ, ನಿಮ್ಮ ಸರ್ಕಾರ ಒಂದೇ ನಗರವನ್ನು ಪ್ರಸ್ತಾಪಿಸಿದ್ದರೆ ಅದನ್ನೇ ನೀಡುತ್ತಿದ್ದೆವು ಎಂದಿದ್ದರು. ಆದರೆ, ಮೂರು ನಗರ ಕಳುಹಿಸಿರುವುದು ಸರಿಯಲ್ಲ ಎಂದು ಆಗ್ರಹಿಸಿದರು. ಇದಕ್ಕೆ ಆ ಭಾಗದ ಶಾಸಕರು ದನಿಗೂಡಿಸಿದರು.

ನಡಹಳ್ಳಿ ಗೈರು
ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ನಮಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಸದನ ಹಾಗೂ ಹೊರಗೆ ಆಗ್ರಹಪಡಿಸುತ್ತಿದ್ದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT