ರಾಜಕೀಯ

ಮತಕ್ಕೆ ಮುನ್ನವೇ ಜೆಡಿಎಸ್ ಸಭಾತ್ಯಾಗ: ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

Srinivas Rao BV

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ.

ಅವಿಶ್ವಾಸ ನಿರ್ಣಯ ಮಂಡಿಸಿದ್ದ ಜೆಡಿಎಸ್ ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನವೇ ಸಭಾತ್ಯಾಗ ಮಾಡುವ ಮೂಲಕ ಹೊಸ ಸಂಪ್ರದಾಯ ಸೃಷ್ಟಿಸಿದ್ದು ಕಾಂಗ್ರೆಸ್ ನವರು ಈ ಬೆಳವಣಿಗೆಯನ್ನು ಪಲಾಯನವಾದ ಎಂದು ಬಣ್ಣಿಸಿದ್ದಾರೆ.

ಜೆಡಿಎಸ್ ಶಾಸಕಾಂಗಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ನೇತೃತ್ವದ ಸರ್ಕಾರ ಈ ಸದನದ ವಿಶ್ವಾಸ ಉಳಿಸಿಕೊಂಡಿದೆ. ಮುಂದೆಯೂ ಉಳಿಸಿಕೊಳ್ಳುತ್ತದೆ. ಕರ್ನಾಟಕ ರಾಜ್ಯದ ಜನರ ವಿಶ್ವಾಸವೂ ನಮ್ಮ ಸರ್ಕಾರದ ಮೇಲಿದೆ ಎಂದು ಘೋಷಿಸಿದರು.

ಸಿ.ಎಂ ಉತ್ತರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಿಮಹಿರುವ ವಿಶ್ವಾಸ ಮುಂದುವರೆಯಲಿ. ನಿಮ್ಮ ಉತ್ತರದಿಂದ ಸಮಗೆ ಸಮಾಧಾನ ಇಲ್ಲ. ಆದ್ದರಿಂದ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಹೇಳಿ ಹೊರ ನಡೆದರು.

ಅವಿಶ್ವಾಸ ನಿರ್ಣಯ ಮಂಡಿಸಿದವರೇ ಸಭಾತ್ಯಾಗ ಮಾಡಿದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರೆಲ್ಲಾ ಇದು ಪಲಾಯನವಾದ ಶೇಮ್, ಶೇಮ್... ಎಂದು ಮೂದಲಿಸಿದರು. ನಂತರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದ ನಿರ್ಣಯವನ್ನು ಓದಿ ಅದನ್ನು ಮತಕ್ಕೆ ಹಾಕಿ ಧ್ವನಿಮತದಿಂದ ಅದು ತಿರಸ್ಕೃಉತಗೊಂಡಿದೆ ಎಂದು ಪ್ರಕಟಿಸಿ ಪ್ರಕ್ರಿಯೆ ಮುಗಿಸಿದರು.

ಸಿಎಂ ತಂತ್ರಗಾರಿಕೆ: ಜೆಡಿಎಸ್ ನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಸರ್ಕಾರ ಉತ್ತರ ನೀದಬೇಕಿತ್ತು. ಮೊದಲು ಮಾತನಾಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂತ್ರಗಾರಿಕೆ ಮೆರೆದರು. ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಂದ ವಿವರಣೆ ಕೊಡಿಸಿದರು. ಜುಗಲ್ ಬಂದಿ ರೀತಿಯಲ್ಲಿ ಕುಮಾರಸ್ವಾಮಿ ಹಾಗೂ ಶಿವಕುಮಾರ್ ಮಾತುಕತೆ ನಡೆಯಿತು.

ಸಿದ್ಧಾಂತ, ಆಚಾರ ವಿಚಾರವೂ ಇಲ್ಲದ ಜೆಡಿಎಸ್ ನ ಅವಿಶ್ವಾಸ ನಿರ್ಣಯ ಸಿನಿಮಾ ಕಥೆಯಂತಿದೆ ಎಂದು ಲೇವಡಿ ಮಾಡಿದರು. ಕೊಟ್ಟ ಕುದುರೆಯನ್ನು ಏರದೆ ಬೇರೆ ಕುದುರೆ ಬೇಕು ಎಂಬುವವರು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅಲ್ಲಮಪ್ರಭುವಿನ ಮಾತು ಕೇಳಿ ಕುಮಾರಸ್ವಾಮಿ ಅವರನ್ನು ಶಿವಕುಮಾರ್ ಜಾರಿದರು. ಕುಮಾರಸ್ವಾಮಿ ಅವರನ್ನು ಬಿಟ್ಟರೆ ಜೆಡಿಎಸ್ ನ 40 ಶಾಸಕರಲ್ಲಿ 39 ಶಾಸಕರಿಗೆ ಸಿದ್ದರಾಮಯ್ಯ ಅವರಲ್ಲಿ ವಿಶ್ವಾಸ ಇದೆ ಎಂದರು. ಡಿ.ಕೆ ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ಪ್ರತಿರೋಧ ಇರಲಿಲ್ಲ.

SCROLL FOR NEXT