ವಿಧಾನಸಭೆ: `ರೀ ಸ್ವಾಮಿ ಜಿಲ್ಲೆ ಹೋಗಿ ನೋಡ್ರಿ. ಇಲ್ಲಿ ಕತೆ ಹೇಳಿಕೊಂಡು ಓಡಾಡುವುದಲ್ಲ. ಭೂಮಿಯ ಹಕ್ಕು ಎಂದರೆ ಪುಗಸಟ್ಟೆ ಗಂಟು ಎಂದು ತಿಳಿದುಕೊಂಡಿದ್ದೀರಾ? ನಾನು ಶಾಸನಸಭೆಗೆ ಬಂದಿರುವುದು ಇಲ್ಲಿ ಕುಳಿತುಕೊಳ್ಳುವುದಕ್ಕಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಯ್ತು. ಜನರಿಗೆ ಕೊಟ್ಟ ಆಶ್ವಾಸನೆ ಪೂರೈಸಿಲ್ಲ. ಓಡಿ ಹೋಗಲು ಬಂದಿಲ್ಲ. ಮಲೆನಾಡು ಭಾಗದಿಂದ ಬಂದ ಶಾಸಕರು ನಪುಂಸಕರಾಗಿದ್ದೇವೆ. ಜನ ಹೋರಾಟ ರೂಪಿಸ್ರಿ ಏನಾಗ್ತದೆ ಅಂತ ನೋಡಿಯೋ ಬಿಡೋಣ...!'
ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವೈಫಲ್ಯ ಮತ್ತು ಕಂದಾಯ ಇಲಾಖೆ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕ ಜೀವರಾಜ್ ಅವರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರ ಮತ್ತು ಸಚಿವರ ವಿರುದ್ಧ ಬುಧವಾರ ಮತ್ತೆ ರೋಷಾವೇಶ ಪ್ರಕಟಿಸಿದರು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನಂತೂ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಅವರು, ಈ ಕಾಯ್ದೆ ಜಾರಿಗೊಳಿಸುವ ಜವಾಬ್ದಾರಿ ಇರುವುದು ನಿಮ್ಮ ಮೇಲೆ. ಒಬ್ಬ ಅಧಿಕಾರಿ ಅಲ್ಲಿಗೆ ಹೋಗುತ್ತಿಲ್ಲ. ನೀವ್ಯಾರು ಅತ್ತ ಗಮನ ಹರಿಸುವುದಿಲ್ಲ.
ನಿಮ್ಮ ಆಜ್ಞೆಗೆ ಕಾಸಿನ ಕಿಮ್ಮತ್ತು ಬಂದಿದೆಯೇನ್ರೀ? ಹೋಗ್ರಿ... ಮಲೆನಾಡು ಭಾಗದ ಒಂದು ಹತ್ತು ಜಿಲ್ಲೆಗೆ ಭೇಟಿ ನೀಡುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲವೇನ್ರೀ ? ಭೂಮಿ ಹಕ್ಕು ಎಂದರೆ ಪುಗಸಟ್ಟೆ ಗಂಟು ಎಂದು ತಿಳಿದುಕೊಂಡಿದ್ದೀರಾ? ಎಲ್ಲ ದಿವಾಳಿ ಹತ್ತಿ ಹೋಗುತ್ತಿದೆ. ನೀವು ಇಲ್ಲಿ ಕತೆ ಹೇಳಿಕೊಂಡು ತಿರುಗುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಕಿವಿಯಲ್ಲಿ ಎಣ್ಣೆ ಹುಯ್ರಿ: ಸ್ಪೀಕರ್ ಅವರು ಈ ರೀತಿ ಅಬ್ಬರಿಸುವುದನ್ನು ಕಂಡು ಕಂಗಾಲಾಗಿ ನಿಂತ ಎಚ್.ಆಂಜನೇಯ ಉತ್ತರ ಏನು ಹೇಳಬೇಕೆಂದು ತೋಚದೆ ಸ್ತಬಟಛಿರಾಗಿ ನಿಂತರು.
ಸದನದಲ್ಲಿ ಉಪಸ್ಥಿತರಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕಿಮ್ಮನೆ ರತ್ನಾಕರ, ರೋಶನ್ ಬೇಗ್, ವಿನಯ್ ಕುಮಾರ್ ಸೊರಕೆ, ಯು.ಟಿ.ಖಾದರ್ ಯಾರೂ ಮಾತನಾಡುವ ಧೈರ್ಯ ಪ್ರಕಟಿಸಲಿಲ್ಲ. `ಈ ಸಚಿವರುಗಳಿಗೆ ಈ ರೀತಿ ಹೇಳಿದರೆ ಅರ್ಥವಾಗುವುದಿಲ್ಲ. ಕಿವಿ ತಿರುಪಿ ಹೇಳಬೇಕು. ಇಲ್ಲವಾದರೆ ಕೊತಕೊತ ಕುದಿಯುವ ಎಣ್ಣೆ ತಂದು ಅವರ ಕಿವಿಯಲ್ಲಿ ಹುಯ್ರಿ. ಆಗ ಎಚ್ಚೆತ್ತುಕೊಳ್ಳುತ್ತಾರೆ' ಎಂದು ಹೇಳಿದರು. ಸ್ಪೀಕರ್ ಕೋಪ ಕ್ಷಣ ಕ್ಷಣಕ್ಕೂ ಏರುತ್ತಿರುವುದನ್ನು ನೋಡಿದ ಹಿಂದಿನ ಸೀಟಿನಲ್ಲಿ ಕುಳಿತು ಶಾಸಕರ ಜತೆ ಚರ್ಚಿಸುತ್ತಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ಓಡಿ ಬಂದು, `ಸಭಾಧ್ಯಕ್ಷರೇ, ಈ ಬಗ್ಗೆ ಸಂಪುಟ ಉಪಸಮಿತಿ ರಚಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ' ಎಂದು ಮನವಿ ಮಾಡಿ ಕೋಪ ತಣ್ಣಗಾಗಿಸುವ ಪ್ರಯತ್ನ ನಡೆಸಿದರು.
ಇದಕ್ಕೂ ಪೋಡಿ-ಪಹಣಿ ವಿಚಾರದಲ್ಲಿ ರಮೇಶ್ಕ್ ಕುಮಾರ್ ಅವರು ಸರ್ಕಾರದ ವೈಫಲ್ಯದ ಬಗ್ಗೆ ಪ್ರಸ್ತಾಪಿಸಿ ಜನಪ್ರತಿನಿಧಿಗಳು ಗಾಢವಾಗಿ ನಿದ್ರಿಸುತ್ತಿರುವುದರಿಂದ ಅಧಿಕಾರಿಗಳು ಕಾನೂನನ್ನು ಜನಪರವಾಗಿ ಜಾರಿ ಮಾಡುತ್ತಿಲ್ಲ. ಎಷ್ಟು ಮಂತ್ರಿಗಳು ರಾಜ್ಯ ಪ್ರವಾಸ ಮಾಡುತ್ತಾರೆ ? ಇವರಿಗೆ ಗನ್ ಮ್ಯಾನ್, ಕಾರು, ಐಬಿ ಸೌಲಭ್ಯ ಇಲ್ಲವೇ? ಇವರು ನೆಂಟರಿಗೆ, ಊರಿಗೆ ಜಾತಿಗೆ ಮಾತ್ರ ಮಂತ್ರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್‍ಕುಮಾರ್ ಅವರ ಮಾತಿಗೂ ಸಹಮತ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ ಅವರು, `ಈ ಮಂತ್ರಿಗಳು ಇಲ್ಲಿ ನಡೆಯುವ ಚರ್ಚೆಗಳನ್ನು ಓದಿ ಸಂಬಂಧಪಟ್ಟವರ ಜತೆ ಚರ್ಚೆ ಮಾಡಬೇಕು. ಇಲ್ಲ ಮುಖ್ಯಮಂತ್ರಿಗಳಿಗೆ ನಾವೇ ಹೇಳಬೇಕು' ಎಂದು ಅಭಿಪ್ರಾಯಪಟ್ಟರು. `ಚರ್ಚೆ ಮಾಡುವುದಕ್ಕೆ ಇನ್ನೂ ಅವಕಾಶ ಬೇಕು' ಎಂದು ಕಾಂಗ್ರೆಸ್ ಶಾಸಕ ಲೋಬೋ ಆಗ್ರಹಿಸಿದಾಗ, `ನೀವು ಹೀಗೆ ಹೇಳಿದರೆ ಆಗುವುದಿಲ್ಲ. ನಾಲ್ಕು ದಿನ ಅಧಿವೇಶನ ಮುಂದ್ಹಾಕಿ ಎಂದು ಒತ್ತಾಯಿಸಿ. ಆಗ ಸಚಿವರ ಕಿವಿ ಹಿಡಿದು ಹೇಳಿ' ಎಂದರು.