ವಿಧಾನಪರಿಷತ್ತು: `ಚಿತ್ರರಂಗದಲ್ಲಿ ಅಂಬರೀಷ್ ಹೀರೋ. ಆದರೆ, ನಿಮ್ಮ ಪಾಲಿಗೇಕೋ ವಿಲನ್ ಆಗಿಬಿಟ್ರಲ್ಲ...' ಹೀಗೆಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು.
ಅಂಬರೀಷ್ ಹೀರೋ ಆಗಿರೋದಕ್ಕೆ ಅವರನ್ನು ನಾವು ಮಂತ್ರಿ ಮಾಡಿರೋದು ಎಂದು ಸಿಎಂ ಪ್ರತ್ಯುತ್ತರ ನೀಡಿದಾಗ, ಅಂಬರೀಷ್ ಹೀರೊ ಅಂತ್ಲೇ ನೀವು ಈಗ ಮಂತ್ರಿ ಸ್ಥಾನದಿಂದ ತೆಗೆಯೋಕೆ ಹೊರಟಿದ್ದೀರಾ ಎಂದು ಈಶ್ವರಪ್ಪ ಮತ್ತೆ ಕುಟುಕಿದರು. ಕೂತ್ಕಳ್ರಿ ಈಶ್ವರಪ್ಪ, ಇದೆಲ್ಲಾ ನಿಮ್ಮ ಭ್ರಮೆ. ಯಾರನ್ನೂ ತೆಗೆಯಲ್ಲ, ಸುಮ್ನೆ ಏನೇನೋ ಮಾತಾಡಬೇಡಿ ಎಂದು ಸಿಎಂ ತಿರುಗೇಟು ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾರಾ ಒಬ್ರು ಅತ್ಯುತ್ತಮ ಕಲಾವಿದೆ ಎಂದು ಪ್ರಶಂಸೆ ಮಾಡಿದರು. ಆಗ ಈಶ್ವರಪ್ಪ, ಅದಕ್ಕೇ ನಾವು ಅವರನ್ನು ಆಯ್ಕೆ ಮಾಡಿರೋದು ಅಂತ ಹೇಳಿದರು. ಆದರೆ, ಎಚ್. ಎಂ.ರೇವಣ್ಣ ಎದ್ದು ನಿಂತು, ಅವರನ್ನ ಹಾಕಿಕೊಂಡು ಒಂದು ಫಿಲ್ಮ್ ತೆಗೀರಿ ಅಂತ ಸಲಹೆ ನೀಡಿದರು. ನೀವು ಹೀರೋ ಆಗಬಹುದು ಎಂದು ಈಶ್ವರಪ್ಪನವರಿಗೆ ಆಡಳಿತ ಪಕ್ಷದ ಸದಸ್ಯರೊಬ್ಬರು ಸಲಹೆ ನೀಡಿದರು. ಇದಕ್ಕೆ ಪ್ರತಿಯಾಗಿ ನಾನು ಹೀರೋ ಆಗುತ್ತೇನೆ, ನೀವು ವಿಲನ್ ಆಗೋಕೆ ರೆಡಿನಾ? ಎಂದು
ರೇವಣ್ಣನವರನ್ನು ಈಶ್ವರಪ್ಪ ಪ್ರಶ್ನಿಸಿದ ಪ್ರಸಂಗವೂ ನಡೆಯಿತು. ಇದಕ್ಕೆ ದನಿಗೂಡಿಸಿದ ಸಂದೇಶ್ ನಾಗರಾಜ್, ನಾನು ಪ್ರೊಡ್ಯೂಸರ್ ಇದಿನಿ. ಒಪ್ಪೊದಾದ್ರೆ ನಾವ್ ಬಂಡವಾಳ ಹಾಕೋಕೆ ರೆಡೀನಪ್ಪ ಎಂದರು.
ಈ ಮುನ್ನ ಚಲನಚಿತ್ರ ಕಲಾವಿದರ ಕುರಿತಾಗಿಯೇ ಒಂದಷ್ಟು ಮಾತುಕತೆ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ತಾರಾ ಅನುರಾಧಾ ಅವರು, ಪಾನೀಯ ನಿಗಮದ ಕಾರ್ಮಿಕರ ಕುರಿತ ಸಮಸ್ಯೆಯನ್ನು ಪ್ರಸ್ತಾಪಿಸಿ, ನಾನು ಪ್ರಶ್ನೆ ಕೇಳುವ ಮುನ್ನ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇನೆ. ನನ್ನ ವೃತ್ತಿ ಚಿತ್ರರಂಗವಾದರೂ ಪರಿಷತ್ ಸದಸ್ಯೆಯಾದ ಮೇಲೆ ಈ ಕೆಲಸಕ್ಕೆ ಹೆಚ್ಚು ಕೊಡುತ್ತಿದ್ದೇನೆ. ಯಾರೋ ಕೊಟ್ಟ ಮಾಹಿತಿ ಆಧರಿಸಿ ಇಲ್ಲಿ ಪ್ರಶ್ನೆ ಕೇಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಈ ವೇಳೆ ಮುಖ್ಯಮಂತ್ರಿಯವರು, ಇನ್ನೆಷ್ಟು ವರ್ಷ ಸಿನೆಮಾ ಮಾಡ್ತೀಯಮ್ಮ... ಎಂದು ಹಾಸ್ಯ ಮಾಡಿದರು. ಇದು ಚಿತ್ರರಂಗದ ಕುರಿತ ಮಾತುಕತೆಗೆ ವೇದಿಕೆಯಾಯಿತು. ನಮ್ಮಲ್ಲೂ ಕಲಾವಿದರಿದ್ದಾರೆ, ಜಯಮಾಲಾ, ಉಮಾಶ್ರೀ ಇದ್ದಾರೆ. ಮೋಟಮ್ಮ ಸಹ ಉತ್ತಮ ಕಲಾವಿದೆ ಎಂದು ಸಿಎಂ ಪ್ರಸ್ತಾಪಿಸಿದರು.