ವಿಧಾನಸಭೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ನೂರಾರು ಕೋಟಿ ವೆಚ್ಚ ಮಾಡುತ್ತಿ ದ್ದರೂ ಕಸದ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ನಗರದಲ್ಲಿ ಕಸದ ಮಾಫಿಯಾ ಎಲ್ಲವನ್ನೂ ನಿರ್ವ ಹಿಸುತ್ತಿದ್ದು, ಅಧಿಕಾರಿಗಳೂ ಮಾಫಿಯಾದೊಂದಿಗೆ ಶಾಮೀಲಾಗಿದ್ದು, ಅತ್ಯಧಿಕ ಹಣ ನೀಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ತಯಾರಿಸಲಾಗಿರುವ ನೂತನ ಟೆಂಡರ್ ಅಂದಾಜು ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ 69ರಲ್ಲಿ ವಿಷಯ ಚರ್ಚಿಸಿದ ಬಿಜೆಪಿ ಸಿ.ಟಿ. ರವಿ, ಬಿ.ಎನ್. ವಿಜಯಕುಮಾರ್ ಹಾಗೂ ಡಾ.ಅಶ್ವತ್ಥನಾರಾಯಣ ಅವರು, ಜನಪ್ರತಿನಿಧಿಗಳಿಲ್ಲದ ಸಮಯದಲ್ಲಿ ಅಧಿಕ ಹಣದ ಅಂದಾಜು ಮಾಡಲಾಗಿದೆ. ನಗರದಲ್ಲಿ ಕಸದ ಮಾಫಿಯಾಗೆ ಎಲ್ಲವನ್ನೂ ನಿರ್ವಹಿಸುವ ಶಕ್ತಿ ಇದ್ದು, ಅವರು ಹೇಳಿದಂತೆಯೇ ಅಂದಾಜು ಪಟ್ಟಿ ತಯಾರಾಗುತ್ತಿದ್ದು, ಅತ್ಯಧಿಕ ಹಣ ನೀಡಲಾಗುತ್ತಿದೆ. ಇದರಿಂದ ನಾಗರಿಕರ ಹಣ ದುರುಪಯೋಗವಾಗುತ್ತಿದೆ ಎಂದು ದೂರಿದರು.
ದೇಶದ ನಾನಾ ನಗರಗಳಲ್ಲಿ ಕಡಿಮೆ ಹಣದಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಚೆನ್ನೈನಲ್ಲಿ ರು.300 ಕೋಟಿ ವೆಚ್ಚ ಮಾಡಲಾಗುತ್ತಿದೆ. ದಿಲ್ಲಿ, ಮುಂಬೈನಲ್ಲೂ ನಮಗಿಂತ ಕಡಿಮೆ ಹಣ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ರು.510 ಕೋಟಿ ವೆಚ್ಚ ಮಾಡುತ್ತಿದ್ದರೂ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಿಲ್ಲ. ಐಟಿ ಸಿಟಿ ಹೋಗಿ ಗಾರ್ಬೆಜ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆಯುತ್ತಿದೆ ಎಂದು ಸಿ.ಟಿ. ರವಿ ದೂರಿದರು.
ಬಿಬಿಎಂಪಿಯ 34 ವಾರ್ಡ್‍ಗಳಿಗೆ ರು.214 ಕೋಟಿ ವೆಚ್ಚ ಮಾಡಿ ತ್ಯಾಜ್ಯ ನಿರ್ವಹಣೆ ಮಾಡಲು ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಅಂದರೆ ಇಡೀ ನಗರಕ್ಕೆ ರು.1,600 ಕೋಟಿ ವೆಚ್ಚವಾಗುತ್ತದೆ. ಇದು ಮೂರು ಪಟ್ಟು ಹೆಚ್ಚು. ಜನಪ್ರತಿನಿಧಿಗಳು ಇಲ್ಲದ ಕಾಲದಲ್ಲಿ ಅಧಿಕಾರಿಗಳು ಈ ರೀತಿ ಅನಗತ್ಯವಾಗಿ ಹಣ ವ್ಯಯ ಮಾಡಲು ಮುಂದಾಗುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಆರೋಪಿಸಿದರು. ಮುಖ್ಯಮಂತ್ರಿ ಅಥವಾ ಉಸ್ತುವಾರಿ ಸಚಿವರಿಂದ ಶುಕ್ರವಾರ ಉತ್ತರ ಕೊಡಿಸುವುದಾಗಿ ಸಹಕಾರ ಸಚಿವ ಮಹದೇವಪ್ರಸಾದ್ ತಿಳಿಸಿದರು.