ಬೆಂಗಳೂರು: ನಿನ್ನೆ ಪುಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಎಫ್‌ಟಿಐಐ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಇಂದು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.
ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದು ತಮ್ಮನ್ನು ಭೇಟಿ ರಮ್ಯಾರನ್ನು ಕೃಷ್ಣ ಪ್ರಶ್ನಿಸಿದ್ದು, ಮಂಡ್ಯ ಜಿಲ್ಲೆಗೆ ಭೇಟಿ ನೀಡುವಾಗ ಏಕಾಏಕಿ ಹೋಗುವುದಲ್ಲ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಾಹಿತಿ ನೀಡಬೇಕು, ಜಿಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ವಿಶ್ವಾಸ ತುಂಬಬೇಕು ಎಂದು ಕೃಷ್ಣ, ರಮ್ಯಾಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಕೃಷ್ಣ ಅವರ ಭೇಟಿಯ ಬಳಿಕ ಮಾತನಾಡಿದ ರಮ್ಯಾ, ಎಸ್.ಎಂ.ಕೃಷ್ಣ ಅವರು ಸಹ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು. ನಾನು ಕೂಡ ರೈತರ ಮನೆಗೆ ಭೇಟಿ ನೀಡಿದ್ದೇನೆ. ಹೀಗಾಗಿ ರೈತರ ಆತ್ಮಹತ್ಯೆ ಬಗ್ಗೆ ಅವರೊಂದಿಗೆ ಚರ್ಚಿಸಿದೆ ಎಂದರು.
ಇದೇ ವೇಳೆ ತಮ್ಮ ಸಿನಿ ಪ್ರಯಾಣದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ರಮ್ಯಾ, ಒಳ್ಳೆ ಸ್ಕ್ರಿಪ್ಟ್ ಬಂದರೆ ಸಿನಿಮಾದಲ್ಲೂ ನಟಿಸುತ್ತೇನೆ ಎಂದರು.