ಬೆಂಗಳೂರು: ಸರ್ಕಾರ ನಿದ್ದೆ ಮಾಡುತ್ತಿದೆ, ಏನೂ ಮಾಡುತ್ತಿಲ್ಲ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದೆಲ್ಲಾ ಬಿಜೆಪಿಯವರು ಹೇಳಿಕೊಂಡು ತಿರುಗಿದರು. ಆದರೆ, ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸಾಧನೆ ಮಾಡಿದೆ. 21 ಜಿಲ್ಲೆಗಳಲ್ಲಿ ಕಾಂಗ್ರೆಸ್ ಮುಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ, ಕಾರ್ಯಕರ್ತರು ಗೆಲವು ಸಾಧಿಸಿದ್ದಾರೆ. ಐದು ಜಿಲ್ಲೆಗಳಲ್ಲಿ ಬಿಜೆಪಿ ಮುಂದಿದೆ. 3ರಲ್ಲಿ ಜೆಡಿಎಸ್ ಮುಂದಿದೆ. ಸದ್ಯಕ್ಕಿರುವ ಮಾಹಿತಿಯಂತೆ 86477 ಸ್ಥಾನಗಳ ಫಲಿತಾಂಶದಲ್ಲಿ 38742 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು, 27646 ಕಡೆಗಳಲ್ಲಿ ಬಿಜೆಪಿಯವರು, 12852 ಕಡೆ ಜೆಡಿಎಸ್ ನವರು ಗೆಲವು ಸಾಧಿಸಿದ್ದಾರೆ. ಆ ಎರಡೂ ಪಕ್ಷದವರು ಸೇರಿದರೂ ನಾವು ಗೆದ್ದಷ್ಟು ಸ್ಥಾನ ಮುಟ್ಟುವುದಿಲ್ಲ ಎಂದರು.
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎಂಬ ಮಾಹಿತಿ ಇದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಮಾತ್ರ ಜೆಡಿಎಸ್‍ನವರು ಮುಂದಿದ್ದಾರೆ. ಮೈಸೂರಿನಲ್ಲಿ ನಾವೇ ಮುಂದಿದ್ದೇವೆ. ಹಾಸನದಲ್ಲಿ ಕಾಂಗ್ರೆಸ್ 1190 ಸ್ಥಾನಗಳಿಸಿದ್ದರೆ, ಜೆಡಿಎಸ್ 1593 ಸ್ಥಾನ ಗೆದ್ದಿದೆ. ಮಂಡ್ಯದಲ್ಲಿ ನಾವು 1429, ಅವರು 1621, ಮೈಸೂರಿನಲ್ಲಿ ನಾವು 2424, ಅವರು 1490 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಮುಂದಿರುವ ಕಡೆಗಳಲ್ಲಿ ಅಂತರ ತುಂಬಾ ಹೆಚ್ಚೇನೂ ಇಲ್ಲ. ಎಲ್ಲಾ ಕಡೆಯೂ ನಮ್ಮದೇ ಪ್ರಾಬಲ್ಯ ಎಂದರು.
ಈಗ ಗೆಲವು ಸಾಧಿಸಿದಂತೆ ಮುಂದಿನ ಬಿಬಿಎಂಪಿ ಚುನಾವಣೆ, ತಾಪಂ, ಜಿಪಂ ಚುನಾವಣೆಗಳಲ್ಲೂ ಗೆಲ್ಲುತ್ತೇವೆ. ಮುಂದಿನ ವಿಧಾನಸಭೆಯಲ್ಲೂ ನಾವೇ ಗೆಲ್ಲುವುದು ಎಂದರು. ಈ ವೇಳೆ ನಿಮ್ಮ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೂ ನಿಮ್ಮನ್ನು ಸಿಎಂ ಮಾಡಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಾನು ಸಿಎಂ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದ್ದೇನೆ. ಅದೇ ಉದ್ದೇಶ. ಬಜೆಟ್ ಮೇಲಿನ ಬೇಡಿಕೆ ಕುರಿತು ಬೆಳಗಾವಿಯಲ್ಲೂ ಅಧಿವೇಶನ ನಡೆಯಲಿ ಎಂಬ ಅಭಿಪ್ರಾಯವಿದೆ. ಹೀಗಾಗಿ 10 ದಿನ ಬೆಳಗಾವಿಯಲ್ಲಿ 10 ದಿನ ಇಲ್ಲಿ ನಡೆಯಲಿ ಎಂಬ ಸಲಹೆ ಇದೆ ಎಂದರು.