ಮೈಸೂರು: ಸಿದ್ದರಾಮಯ್ಯ ಅವರು ಬಹಳ ಕಾಲ ಮುಖ್ಯಮಂತ್ರಿಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದ ಬಿ.ಎಸ್.
ಯಡಿಯೂರಪ್ಪ ಭವಿಷ್ಯ ನುಡಿದರು. ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನ, ರಾಹುಲ್ ಗಾಂಧಿ ಹೆಚ್ಚು ಕ್ರಿಯಾಶೀಲ ಆಗುತ್ತಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಹೆಚ್ಚು ದಿನ ಮುಂದುವರಿಯುವುದಿಲ್ಲ. ಒಂದೊಮ್ಮೆಅವರು ಬಹಳ ಕಾಲ ಮುಂದುವರಿದರೆ
ಕಾಂಗ್ರೆಸ್‍ಗೆ ಮಾತ್ರವಲ್ಲ, ರಾಜ್ಯದ ಜನತೆಗೂ ಒಳ್ಳೆಯದಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಭೀರತೆ ಇಲ್ಲ. ವಿಧಾನಸಭೆಗೆ ಸಚಿವರು
ಬರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಿಲ್ಲ. ಹಣಕಾಸು ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಈವರೆಗೂ
ಸಿದ್ದರಾಮಯ್ಯ ನಡೆಸಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ತೆರಳಿ ಸರ್ಕಾರಿ ಯೋಜನೆಗಳ ಪ್ರಗತಿ ಪರಿಶೀಲನೆ
ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 5 ವರ್ಷದಲ್ಲಿ ರು. 45,329 ಕೋಟಿ ಸಾಲ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲೇ ರು. 42,329 ಕೋಟಿ ಸಾಲ ಮಾಡಿದೆ. ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸಾಲ ಮಾಡಿದ್ದನ್ನು ಹಲವು ಬಾರಿ ಟೀಕಿಸಿದ್ದರು. ಈಗ ಮುಖ್ಯಮಂತ್ರಿಯಾಗಿ ನೀವೇನು ಮಾಡ್ತಿದ್ದೀರಾ ಎಂದು ಪ್ರಶ್ನಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ 1 ವಾರ, ಬೆಂಗಳೂರು ವಿಧಾನಸೌಧದಲ್ಲಿ 1 ವಾರ ಅಧಿವೇಶನ ನಡೆಸುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಸುವರ್ಣ ಸೌಧದಲ್ಲಿರುವ ಕಸ ತೆಗೆಯಲು ಪ್ರತಿ ಬಾರಿ 4-5 ಕೋಟಿ ವೆಚ್ಚಮಾಡಬೇಕಾಗದ ಪರಿಸ್ಥಿತಿ ಇದೆ. ಹೀಗಾಗಿ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತುಘಲಕ್ ದರ್ಬಾರ್ ನಡೆಸುವುದನ್ನು ಬಿಟ್ಟು,
ಬೆಳಗಾವಿ ಸುವರ್ಣ ಸೌಧದಲ್ಲಿ 1 ತಿಂಗಳ ಅಧಿವೇಶನ ನಡೆಸಬೇಕು ಎಂದು ಸಲಹೆ ಮಾಡಿದರು.
ರಾಜ್ಯದ ಬಗ್ಗೇ ಆಸಕ್ತಿ: ನನಗೆ ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇದೆ. ಪಕ್ಷದ ವರಿಷ್ಠರುಹೇಳಿದಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದೇನೆ. ಕೇಂದ್ರದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ನನ್ನ ಗಮನ ಕರ್ನಾಟಕದ ಮೇಲಿದ್ದು, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ಯಡಿಯೂರಪ್ಪ ಹೇಳಿದರು. ಜೂ.10 ರಂದು ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ
ಅಧ್ಯಕ್ಷ ಅಮಿತ್ ಷಾ ಅವರ ಮೈಸೂರು ಭೇಟಿ ಕಾರ್ಯಕ್ರಮವು ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿದೆ ಎಂದು ತಿಳಿಸಿದರು.
ಹತಾಶ ಹೇಳಿಕೆ: ಸಿಎಂ ತಿರುಗೇಟು
ಮೈಸೂರು: ಗ್ರಾಪಂ ಚುನಾವಣಾ ಫಲಿತಾಂಶದಿಂದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹತಾಶ ರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯದ ಜನತೆ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. ನಾವು ಯಾರೂ ಪ್ರಚಾರಕ್ಕೆ ಹೋಗಿಲ್ಲ. ಬಿಜೆಪಿಯವರು ಮೋದಿ ಫೋಟೋ ಹಿಡಿದು ಪ್ರಚಾರ ಮಾಡಿದ್ದಾರೆ. ರಾಜ್ಯ ಸರ್ಕಾರದ ಎರಡು ವರ್ಷದ ಜನಪರ ಆಡಳಿತ ಮೆಚ್ಚಿ ಜನತೆ ಮತ ನೀಡಿದ್ದಾರೆ. ಇದರಿಂದ ಬಿಜೆಪಿಯಬಿ.ಎಸ್.ಯಡಿಯೂರಪ್ಪ ಹತಾಶರಾಗಿದ್ದಾರೆ. ಹೀಗಾಗಿ ನನ್ನ ಖುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ.