ವಿಧಾನಸಭೆ: ಮೊದಲು ನಿಮ್ಮವರು ಮೂರು ಜನರನ್ನು ಒಳಗೆ ಹಾಕಿ, ನಾನು ಬೇಕಾದರೆ ಅವರ ಹಿಂದೆ ಹೋಗುತ್ತೇನೆ. ಮಾಜಿ ಸಚಿವ ಉಮೇಶ ಕತ್ತಿ ಕಾಂಗ್ರೆಸ್ ಶಾಸಕರಿಗೆ ಈ ರೀತಿ ಸವಾಲು ಹಾಕಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು, 'ಮೊದಲು ಉಮೇಶ್ ಕತ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅವರು ಉಳಿಸಿಕೊಂಡಿರುವ ಬಾಕಿ ಮೊದಲು ಕೊಡಿಸಿ' ಎಂದು ವ್ಯಂಗ್ಯವಾಡಿದರು. ಬಿಜೆಪಿ ನಾಯಕರ ಜತೆ ಸೇರಿಕೊಂಡು ಉಮೇಶ್ ಕತ್ತಿ ಸರ್ಕಾರದ ವಿರುದ್ಧ ಮಾತನಾಡುವುದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಶಾಸಕರು ಕತ್ತಿ ಅವರ ಕಾಲೆಳೆದರು.
ಇದರಿಂದ ಕೊಂಚ ವಿಚಲಿತರಾದ ಕತ್ತಿ, 'ಆಯ್ತಪ್ಪ, ಹಾಗಾದರೆ ಮೊದಲು ಮೂವರು ನಿಮ್ಮವರನ್ನು (ಸಕ್ಕರೆ ಕಾರ್ಖಾನೆ ಮಾಲೀಕತ್ವ ಹೊಂದಿದ ಸಚಿವರು ) ಒಳಗೆ ಹಾಕಿ ನಾನು ಅವರ ಜತೆಯೇ ನಡೆದುಕೊಂಡು ಬರುತ್ತೇನೆ' ಎಂದರು. ಅಷ್ಟು ಮಾತ್ರವಲ್ಲ, 'ನಾನು ಸಕ್ಕರೆ ಕಾರ್ಖಾನೆ ಮಾಲೀಕನೇ ಅಲ್ಲ. ನಾನು ಕೇವಲ ಮಾರ್ಗದರ್ಶನ ಮಾತ್ರ ನೀಡುತ್ತೇನೆ. ಏಕೆಂದರೆ ನನ್ನ ಮಗ ಸಕ್ಕರೆ ಕಾರ್ಖಾನೆ ಮಾಲೀಕ' ಎಂದರು. ಇದು ಸದನದಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು.
'ಯಾಕಯ್ಯಾ ನಾಚೀಕೆ ಇಲ್ಲದೇ ಈ ರೀತಿ ಮಾತಾಡ್ತೀಯಾ ಎಂದು ಕುಳಿತಲ್ಲಿಂದಲೇ ಪ್ರಶ್ನಿಸಿದಾಗ ಸುಮ್ಮನೆ ಕುಳಿತ ಉಮೇಶ ಕತ್ತಿ, ಕೆಲ ಹೊತ್ತು ಬಿಟ್ಟು ಸದನದಿಂದ ಎದ್ದು ಹೋದರು.