ಬೆಂಗಳೂರು: ಎಚ್1ಎನ್1 ಚಿಕಿತ್ಸೆ ಅಥವಾ ತಪಾಸಣೆಗೆ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾ ಡುವ ಆಸ್ಪತ್ರೆ, ಪ್ರಯೋಗಾಲಯಗಳ ಪರವಾನಗಿ ರದ್ದುಪಡಿಸುವ ಕ್ರಮಕ್ಕೆ
ರಾಜ್ಯ ಸರ್ಕಾರ ಮುಂದಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಬುಧವಾರ ನಡೆದ ವೈದ್ಯಾಧಿಕಾರಿಗಳ ಸಭೆಯಲ್ಲಿ ಈ
ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ವ್ಯಾಪಿಸುತ್ತಿರುವ ಎಚ್ 1ಎನ್1 ರೋಗಕ್ಕೆ ಆದಷ್ಟು ಕಡಿಮೆ ದರದಲ್ಲಿ ಚಿಕಿತ್ಸೆ ನೀಡಬೇಕು. ಆದರೆ ಕೆಲವು ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ದರ ವಿಧಿಸುತ್ತಿದ್ದು, ಇಂತಹ ಪ್ರಕರಣ ಸಾಬೀತಾದರೆ ಕೂಡಲೇ ಪರವಾನಗಿ ರದ್ದುಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ರವಾನಿಸಿದೆ. ಅಧಿಕ ಶುಲ್ಕ ವಸೂಲಿ ಯ ದೂರು ಕಂಡುಬಂದರೆ, ವಿಧಿಸಿದ ದರಪಟ್ಟಿಯ ಬಗ್ಗೆ ವಿವರಣೆ ಕೇಳಿ ಆರೋಗ್ಯ ಇಲಾಖೆಯು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಿದೆ. ಆಸ್ಪತ್ರೆಗಳು ಸಲ್ಲಿಸುವ ದರಪಟ್ಟಿ ಯಲ್ಲಿ ಹೆಚ್ಚಿನ ಶುಲ್ಕ ಕಂಡುಬಂದರೆ ಕೂಡಲೇ ಪರವಾನಗಿ ರದ್ದುಮಾಡಲಾಗುತ್ತದೆ.
ಎಚ್1ಎನ್1 ಚಿಕಿತ್ಸೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರಯೋಗಾಲಯ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎಚ್1ಎನ್1 ಸೇರಿದಂತೆ ಎಲ್ಲ ಬಗೆಯ ಸಾಂಕ್ರಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಗೆ ಈ ಭಾಗದಲ್ಲಿ 5 ಪ್ರಯೋಗಾಲಯ ತೆರೆಯಲಾಗುತ್ತದೆ.
ರು. 3-4 ಕೋಟಿ ವೆಚ್ಚದಲ್ಲಿ ಪ್ರಯೋ ಗಾಲಯ ನಿರ್ಮಿಸುವ ಯೋಜನೆಯಿದ್ದು, ಇನ್ನೂ ಸ್ಥಳ ನಿಗದಿಯಾಗಿಲ್ಲ. ಎರಡು ಸಂಸ್ಥೆಗೆ ನೋಟಿಸ್: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ.ಖಾದರ್, ಈಗಾಗಲೇ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಹಾಗೂ ಕ್ಲೂಮಾಕ್ಸ್ ಸ್ ಪ್ರಯೋಗಾಲಯದಲ್ಲಿ ಹೆಚ್ಚಿನ ದರ ವಿಧಿಸಿದ ಬಗ್ಗೆ ದೂರು
ಬಂದಿದ್ದು, ಶುಲ್ಕ ಪಟ್ಟಿ ಕೇಳಿ ಇಲಾಖೆಯಿಂದ ನೋಟಿಸ್ ಜಾರಿಮಾಡಲಾಗಿದೆ. ಹೆಚ್ಚು ದರ ವಿಧಿಸಿರುವ ಮಾಹಿತಿ ಲಭ್ಯವಾದರೆ ಕ್ರಮ ಕೈಗೊಳ್ಳಲಾಗುವುದು. ಈ ದರವನ್ನು ನಂತರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಶ್ವಾಸಕೋಶ ತಜ್ಞ ಡಾ.ಎಚ್.ಪರಮೇಶ್ವರ್ ಅವರ ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚಿಸಿದ್ದು, ಚಿಕಿತ್ಸೆ ನೀಡಲು ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಮಾರ್ಗಸೂಚಿ ನಿಗದಿಪಡಿಸಲಾಗುವುದು. ರೋಗದ ಯಾವ ಹಂತದಲ್ಲಿ, ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು. ನೋಡಲ್ ಅಧಿಕಾರಿ ನೇಮಿಸಿ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಔಷಧಿ ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇಲಾಖೆ ಮೂಲಕ ಉಚಿತ ಲಸಿಕೆ ಪೂರೈಸಲಾಗುವುದು. ಮಹಾರಾಷ್ಟ್ರ ರಾಜ್ಯದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು, ಸಾಧ್ಯವಿದ್ದರೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.