ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂದಿ ಒಪ್ಪಿಗೆ ಪಡೆದೇ ರಾಹುಲ್ ಗಾಂಧಿ ರಜೆಯ ಮೇಲೆ ತೆರಳಿದ್ದಾರೆ. ಆದರೂ ಕೇಂದ್ರ ಸರ್ಕಾರ ಅವರ ಕಚೇರಿಯಲ್ಲಿ ಗುಪ್ತದಳದ ಅಧಿಕಾರಿಗಳಿಂದ ಬೇಹುಗಾರಿಕೆ ನಡೆಸಿರುವುದು ಖಂಡನೀಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಹುಲ್ ಅವರಿಗೆ ಎಸ್ ಪಿಜಿ ಭದ್ರತೆ ಇದೆ. ಈ ಎಲ್ಲ ಮಾಹಿತಿ ದೆಹಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುತ್ತದೆ. ಆದರೂ ಬೇಹುಗಾರಿಕೆ ನಡೆಸುತ್ತಿರುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ, ಮಾತ್ರವಲ್ಲ ರಾಹುಲ್ ತೇಜೋವಧೆ ಮಾಡುವ ಉದ್ದೇಶ, ಈ ಹಿಂದೆ ಗುಜರಾತ್ ನಲ್ಲೂ ಕಾಂಗ್ರೆಸ್ ನಾಯಕರ ಮೇಲೆ ಬಿಜೆಪಿ ಸರ್ಕಾರ ಬೇಹುಗಾರಿಕೆ ನಡೆಸಿತ್ತು. ಇದು ಅಕ್ಷಮ್ಯ ಎಂದಿದ್ದಾರೆ.