ಕೇಂದ್ರದಿಂದ ಬರುವ ಅನುದಾನ ಕಡಿತ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಕಡಿತ ಮಾಡಿರುವುದರಿಂದ ಸಾಕಷ್ಟು ಕೋಟಿ ಹಣವನ್ನು ರಾಜ್ಯವೇ ಭರಿಸಬೇಕಿದೆ. ತೆರಿಗೆ ಸಂಗ್ರಹದ ಪಾಲನ್ನು ಶೇ.42ಕ್ಕೆ ಹೆಚ್ಚಿಸಿ, ರು.8230 ಕೋಟಿ ಹಣ ಹೆಚ್ಚು ಬರುವಂತೆ ಮಾಡಿರುವ ಕೇಂದ್ರ, ಅದರ ಅನುದಾನದಲ್ಲಿ ರು.8480 ಕೋಟಿ ಕಡಿತದ ಜತೆಗೆ ಯೋಜನೆಗಳ ತನ್ನ ಪಾಲಿನಲ್ಲೂ ಕಡಿತ ಮಾಡಿದೆ. ಹೀಗಾಗಿ ರು.1987 ಕೋಟಿ ಹಣ ಅಧಿಕವಾಗಿ ವಿನಿಯೋಗಿಸಬೇಕಿದೆ.
ವಿಧಾನಸಭೆ: ನಮ್ಮದು ಸರ್ವರ ಬಜೆಟ್. ಸಾಮಾಜಿಕ ನ್ಯಾಯದ ಪ್ರಗತಿಪರ, ಮುನ್ನೋಟದ ಬಜೆಟ್. ಆರ್ಥಿಕವಾಗಿ ದುರ್ಬಲರಾಗಿರುವ, ವಂಚಿತರಾದವರಿಗೆ ವಿಶೇಷ ಗಮನ ನೀಡಬೇಕಾದ ಅಗತ್ಯ, ಕರ್ತವ್ಯವನ್ನೂ ನಿಭಾಯಿಸಲಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು. ಎಲ್ಲ ವರ್ಗ, ಜಾತಿಗೂ ಅನ್ವಯಿಸುವ ಸರ್ವಾಂಗೀಣ ಬೆಳವಣಿಗೆ ಬಜೆಟ್. ಅಹಿಂದಕ್ಕೆ ಸೀಮಿತವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಸಮರ್ಥಿಸಿಕೊಂಡು, ಅದಕ್ಕೆ ನುಮೋದನೆಯನ್ನೂ ಪಡೆದುಕೊಂಡರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡುವ ರಾಜಕೀಯ ಭಾಷಣಕ್ಕೇ ಬಹುತೇಕ ಸಮಯ ಬಳಸಿಕೊಂಡರು. ಪದ್ಮನಾಭನಗರದಿಂದ ಯಾವುದೇ ಬಜೆಟ್ ಸೂಚನೆ ಬಂದಿಲ್ಲ, ಅಲ್ಲಿ ತಿಂದಿರುವ ನೋವು ಮರೆಯಲು ಸಾಧ್ಯವಿಲ್ಲ. ಸಿಎಂ ಆಗುವ ಅವಕಾಶ ತಪ್ಪಿಸಿದರು. ಬೇಕಾದರೆ ದೇವೇಗೌಡ ಸೇರಿದಂತೆ ಸಿಂಧ್ಯಾ, ಸಿಎಂ ಇಬ್ರಾಹಿಂ, ಶರದ್ ಪವಾರ್ ಎಲ್ಲರನ್ನೂ ಕೇಳೋಣ ಎಂದು ಸವಾಲು ಹಾಕಿದರು. ರಾಜಕೀಯ ಮಾತನಾಡಲ್ಲ. ಈ ಸಮಯ ಅದಕ್ಕೆ ಬಳಸಿಕೊಂಡಿಲ್ಲ. ಆದರೆ, ಕುಮಾರಸ್ವಾಮಿ ಪ್ರಸ್ತಾಪಕ್ಕೆ ಉತ್ತರ ನೀಡಬೇಕು ಎಂದೇ ಇವತ್ತು ರಾಜಕೀಯ ಮಾತನಾಡುತ್ತಿದ್ದೇನೆ ಎಂದು ಸಮಜಾಯಿಷಿಯನ್ನೂ ನೀಡಿದರು.
ಸರ್ವರಿಗೂ ಲಾಭ
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಜೆಟ್ ಮೇಲೆ ಚರ್ಚೆ ಮಾಡಿರುವ 32 ಜನರಲ್ಲಿ ಸಾಕಷ್ಟು ಜನ ಇದು ಅಹಿಂದ ಬಜೆಟ್ ಎಂದಿದ್ದಾರೆ. ಬಿಪಿಎಲ್ ಕಾರ್ಡ್‍ದಾರರಿಗೆ ಪುಕ್ಕಟ್ಟೆ ಅಕ್ಕಿ ಕೊಡುತ್ತಿದ್ದೇವೆ. ಇದು ಅಹಿಂದಗೆ ಮಾತ್ರನಾ? ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ. ಎಲ್ಲ ವರ್ಗದ ಮಕ್ಕಳಿಗೂ ಅನ್ವಯ ಅಲ್ಲವೇ? ಎಪಿಎಲ್‍ಗೆ ಅಕ್ಕಿ ಕೊಡುತ್ತಿದ್ದೇವೆ. ಇದು ಯಾರಿಗೆ? ಶೂನ್ಯ ಬಡ್ಡಿ ಸಾಲ ಯಾರು ಪಡೆದುಕೊಳ್ಳುತ್ತಾರೆ? ನೀರಾವರಿಗೆ ರು.12ರಿಂದ ರು.13 ಸಾವಿರ ಕೋಟಿ ಕೊಟ್ಟಿದ್ದೇವೆ. ಇದು ಎಲ್ಲರ ಭೂಮಿಗೂ ನೀರು ಕೊಡುವುದಿಲ್ಲವೇ? ಬಿಪಿಎಲ್ ಕುಟುಂಬದ ಒಬ್ಬರು ಸಹಕಾರ ಸಂಘದಲ್ಲಿ ಸದಸ್ಯನಾಗಲು ಸರ್ಕಾರವೇ ಹಣ ಭರಿಸುತ್ತಿದೆ. ಈ ಮೂಲಕ ಯಶಸ್ವಿನಿ ಆರೋಗ್ಯ ಯೋಜನೆ ಕುಟುಂಬಕ್ಕೆ ಅನ್ವಯಿಸುತ್ತದೆ. ಹೀಗಾಗಿ ಎಲ್ಲರನ್ನೂ ಒಳಗೊಂಡಿರುವ ನಮ್ಮದು ಸರ್ವರ ಬಜೆಟ್ ಎಂದು ಸಿದ್ದರಾಮಯ್ಯ ಬಾರಿ ಬಾರಿ ಹೇಳಿದರು.
ಪರಿಶಿಷ್ಟರ ಮೇಲೆ ನಮಗೆ ಕಾಳಜಿ ಇದ್ದುದ್ದರಿಂದಲೇ ಅವರಿಗಾಗಿ ಕಾನೂನು ಮಾಡಿದ್ದು. ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಹಣವನ್ನು ಅವರಿಗೇ ವೆಚ್ಚ ಮಾಡುವ ಕಾನೂನು ತಂದು ಬದ್ಧತೆ ಮೆರೆದಿದ್ದೇವೆ. ಅದು ಎಂದಿಗೂ ಲ್ಯಾಪ್ಸ್ ಆಗುವುದಿಲ್ಲ. ಇತರೆ ಯೋಜನೆಗಳಿಗೆ ಉಪಯೋಗವೂ ಆಗುವುದಿಲ್ಲ. ಈ ವರ್ಷ ರು.15834 ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ರು.7179 ಕೋಟಿ ವೆಚ್ಚವಾಗಿದೆ. ಪ್ರಥಮ ವರ್ಷ ಕಾನೂನು ಜಾರಿಯಲ್ಲಿ ಅಲ್ಪ ಸಮಸ್ಯೆ ಆಗಿದೆ. ಮುಂದಿನ ವರ್ಷದಲ್ಲಿ ಸಂಪೂರ್ಣ ವಿನಿಯೋಗವಾಗಲಿದೆ ಎಂದರು. ಒಟ್ಟಾರೆ ನಮ್ಮದು ಸರ್ವರ ಬಜೆಟ್ ಆಗಿದ್ದು, ಇಲ್ಲಿ ಚರ್ಚೆ ಮಾಡಿರುವ ಎಲ್ಲರ ವಿಷಯಗಳಿಗೆ ಸಮಂಜಸ ಉತ್ತರ ನೀಡಿದ್ದೇನೆ ಸಭಾಧ್ಯಕ್ಷರೇ. ನಾಲ್ಕು ತಿಂಗಳ ಲೇಖಾನುದಾನಕ್ಕೆ ಸಮ್ಮತಿ ನೀಡಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಮಾತು ಮುಗಿಸಿದರು.
ಕೇಂದ್ರದಿಂದ ಹಣ ಕಡಿತ
ಕೇಂದ್ರದಿಂದ ಬರುವ ಅನುದಾನ ಕಡಿತ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಕಡಿತ ಮಾಡಿರುವುದರಿಂದ ಸಾಕಷ್ಟು ಕೋಟಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ತೆರಿಗೆ ಸಂಗ್ರಹದ ಪಾಲನ್ನು ಶೇ.42ಕ್ಕೆ ಹೆಚ್ಚಿಸಿ, ರು.8230 ಕೋಟಿ ಹಣ ಹೆಚ್ಚು ಬರುವಂತೆ ಮಾಡಿರುವ ಕೇಂದ್ರ, ಅದರ ಅನುದಾನದಲ್ಲಿ ರು.8480 ಕೋಟಿ ಕಡಿತದ ಜತೆಗೆ ಯೋಜನೆಗಳ ತನ್ನ ಪಾಲಿನಲ್ಲೂ ಕಡಿತ ಮಾಡಿದೆ. ಹೀಗಾಗಿ ರು.1987 ಕೋಟಿ ಹಣವನ್ನು ರಾಜ್ಯದ ಅಧಿಕವಾಗಿ ವಿನಿಯೋಗಿಸಬೇಕಿದೆ. ಕೇಂದ್ರ ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕಡೆ ಕಿತ್ತುಕೊಂಡಿದೆ ಎಂದು ಅಂಕಿ-ಅಂಶದ ಸಹಿತ ವಿವರ ನೀಡಿದರು. ಕೇಂದ್ರ ಸರ್ಕಾರದ ಅನುದಾನ ಕಡಿಮೆ ಆಗಿರುವುದಕ್ಕೆ ನಿಯೋಗ ಕರೆದುಕೊಂಡು ಹೋಗೋಣ ಎಂದರೆ ನಮ್ಮದೇನೂ ತಕರಾರಿಲ್ಲ. ಹೋಗೋಣ. ಆದರೆ, ಕೇಂದ್ರದ ಹಣ ಹೆಚ್ಚಾಗುತ್ತಿದೆ ಎಂದು ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಅನುದಾನಗಳ ಕಡಿತದಿಂದ ರಾಜ್ಯದಲ್ಲಿ ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಊಟ ಸೇರಿದಂತೆ ಅನೇಕ ಯೋಜನೆಗಳಿಗೆ ತೊಡಕಾಗಿದೆ. ಆಯೋಜನೆಗಳನ್ನು ನಾವು ನಿಲ್ಲಿಸುವಂತಿಲ್ಲ. ಆದರೆ, ಅಷ್ಟೂ ಹಣವನ್ನು ಭರಿಸಬೇಕಿದೆ ಎಂದರು.
ತೆರಿಗೆ ಸಂಗ್ರಹದಲ್ಲಿ ನಂ.1
ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ರಾಜ್ಯ ಮೊದಲ ಸ್ಥಾನದಲ್ಲಿದೆ. ಐಎಂಎಲ್‍ಗೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ಸುಮಾರು 650 ಕೋಟಿ ಸಂಗ್ರಹ ಕಡಿಮೆಯಾಗಿದೆ. ಬಿ ಖಾತಾದ ನಿವೇಶಣಗಳ ನೋಂದಣಿ 2 ತಿಂಗಳು ಸ್ಥಗಿತಗೊಂಡಿದ್ದರಿಂದ ಮುದ್ರಾಂಕ ಶುಲ್ಕದಲ್ಲಿ 350 ಕೋಟಿ ಕಡಿಮೆಯಾಗಿದೆ ಅಷ್ಟೇ. ಮುಂದಿನ ವರ್ಷದಲ್ಲಿ ಎಲ್ಲ ರೀತಿಯ ತೆರಿಗೆ ಸಂಗ್ರಹದಲ್ಲೂ ಗುರಿ ಸಾಧಿಸಲಿದ್ದೇವೆ ಎಂದರು. ಆನ್‍ಲೈನ್ ವ್ಯಾಪಾರಕ್ಕೆ ವಾಣಿಜ್ಯ ತೆರಿಗೆಯನ್ನು ಸರ್ಕಾರ ವಿಧಿಸುತ್ತಿದೆ. ಫ್ಲಿಪ್‍ಕಾರ್ಟ್ ಸಂಸ್ಥೆ ರು.226 ಕೋಟಿ ತೆರಿಗೆ ಪಾವತಿಸಿದೆ. ಅಮೆಜಾನ್, ಆಲಿಬಾಬಾ, ಮಿಂತ್ರಾ ಸೇರಿದಂತೆ ಯಾವುದೇ ಸಂಸ್ಥೆಯನ್ನು ಬಿಟ್ಟುಬಿಡುವ ಒತ್ತಡ ನಮ್ಮ ಮೇಲಿಲ್ಲ. ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸುತ್ತೇವೆ. ಕುಮಾರಸ್ವಾಮಿ ಹೇಳಿದರೀತಿ ವಾಣಿಜ್ಯ ಇಲಾಖೆ ಆಯುಕ್ತರನ್ನು ವರ್ಗಾಯಿಸಿಲ್ಲ. ಅಜಯ್ ಸೇಟ್ ಅವರು ಮಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲು ಮನವಿ ಮೇಲೆ ರಜೆ ತೆಗೆದುಕೊಂಡು ಹೋಗಿದ್ದಾರೆ. ಅವರನ್ನೇ ಬೇಕಾದರೆ ಕೇಳಲಿ ಎಂದರು.