ರಾಜಕೀಯ

ಸರ್ಕಾರಿ ವಕೀಲರಿಗೆ ಭತ್ಯೆ, ಸಿಎಂಗೆ ತುರ್ತು ನೋಟಿಸ್

Rashmi Kasaragodu

ಬೆಂಗಳೂರು: ಸರ್ಕಾರಿ ವಕೀಲರಿಗೆ ಅಗತ್ಯ ಸೌಲಭ್ಯಗಳಾದ ವೈದ್ಯಕೀಯ, ಸಾರಿಗೆ ಸೇರಿ ಇನ್ನಿತರೆ ಭತ್ಯೆಗಳು ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ರಾಜ್ಯ ಸರ್ಕಾರದ ನ್ಯಾಯಾಗ ಸೇವೆಯಲ್ಲಿರುವ ಸರ್ಕಾರಿ ವಕೀಲರಿಗೆ ವೈದ್ಯಕೀಯ, ಸಾರಿಗೆ ಹಾಗೂ ಇನ್ನಿತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕೋರಿ ವಕೀಲ ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಆನಂದ್ ಭೈರಾರೆಡ್ಡಿ ಮತ್ತು ನ್ಯಾ.ಜಿ.ನರೇಂದರ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಇನ್ನಿತರೆ ಪ್ರತಿವಾದಿಗಳಾದ ಗೃಹ ಸಚಿವ ಕೆ.ಜೆ.ಜಾರ್ಜ್, ಕಾನೂನು ಸಚಿವ ಟಿ.ಬಿ.ಜಯಚಂದ್ರ ಮತ್ತು ಅಡ್ವೊಕೇಟ್ ಜನರಲ್ ಅವರಿಗೂ ಸಹ ತುರ್ತು ನೋಟಿಸ್ ಜಾರಿ ಮಾಡಿದೆ.

 ಏನಿದು ವಿವಾದ?
ಸರ್ಕಾರದ ವಿಶೇಷ ಅಭಿಯೋಜಕರಾಗಿರುವ ನಾರಾಯಣ ರೆಡ್ಡಿ ಇತ್ತೀಚಿಗಷ್ಟೆ ಅನಾರೋಗ್ಯದ ನಿಮಿತ್ತ 35 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಚಿಕಿತ್ಸಾ ವೆಚ್ಚ ರು. 6 ಲಕ್ಷ ಇತರೆ ವೈದ್ಯಕೀಯ ವೆಚ್ಚ ಸೇರಿ ಸುಮಾರು ರು. 10 ಲಕ್ಷ ತಲುಪಿತ್ತು. ಆದರೆ, ಅವರ ವೈದ್ಯಕೀಯ ಭತ್ಯೆ ಪಾವತಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಅನಾರೋಗ್ಯದಿಂದ
ಬಳಲಿ ಸಿಂಗಾಪುರಕ್ಕೆ ಚಿಕಿತ್ಸೆಗೆ ತೆರಳಿದ್ದ ಸಚಿವ ಅಂಬರೀಷ್ ಅವರ ವೈದ್ಯಕೀಯ ವೆಚ್ಚ ರು. 1,24,46,599 ರಾಜ್ಯ ಸರ್ಕಾರವೇ ಭರಿಸಿದೆ. ಆದರೆ, ಸರ್ಕಾರದಿಂದ ನಿಯೋಜಿಸಲ್ಪಟ್ಟು ತಮ್ಮ ವೃತ್ತಿಪರತೆಯ ಜಾಣ್ಮೆಯೆಲ್ಲವನ್ನೂ ಪ್ರದರ್ಶಿಸುವ ಮೂಲಕ
ಸರ್ಕಾರದ ಪರವಾಗಿ ನ್ಯಾಯಾಂಗ  ಕ್ಷೇತ್ರದಲ್ಲಿ ಹೋರಾಟ ನಡೆಸುತ್ತಿರುವ ವಕೀಲರು ಅಗತ್ಯ ಸೌಲಭ್ಯದಿಂದ ವಂಚಿತ ರಾಗಿದ್ದಾರೆ. ಸಾಮಾನ್ಯವಾಗಿ ಸರ್ಕಾರಿ ವಕೀಲರು ಎಲ್ಲರಿ ಗಿಂತಲೂ ಹೆಚ್ಚಿನ ಮಾನಸಿಕ ಒತ್ತಡದಲ್ಲಿ ಕಾರ್ಯ ನಿರ್ವ ಹಿಸುತ್ತಾರೆ. ಅವರೂ ಕೂಡ ಸರ್ಕಾರದ ಒಂದು ಭಾಗ. ಹೀಗಾಗಿ ಅವರಿಗೂ ಸರ್ಕಾರದ ನಿಯಮಾವಳಿ ಅನುಸಾರ ಕಲ್ಪಿಸಲಾಗುವ ವೈದ್ಯಕೀಯ ಭತ್ಯೆ, ಸಾರಿಗೆ ಭತ್ಯೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

SCROLL FOR NEXT