ಬೆಂಗಳೂರು: ರಾಜ್ಯ ಸರ್ಕಾರ ಕೋಮಾದಲ್ಲಿದೆ. ಇದು `ಬ್ರೈನ್ ಡೆಡ್' ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಜನರ ಮನಸ್ಸಿನಲ್ಲಿ ಮತ್ತು ನಮ್ಮ ಮನಸ್ಸಿನಲ್ಲಿ ಸರ್ಕಾರ ನಿಷ್ಕ್ರಿಯತೆಗೊಂಡಿರುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಯಾವುದೇ ಚಟುವಟಿಕೆಯೂ ನಡೆಯುತ್ತಿಲ್ಲ' ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ತಾವು ಅಹಿಂದ ಪರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ವಿಭಾಗಕ್ಕೆ ಬಜೆಟ್‍ನಲ್ಲಿ ಮೀಸಲಿಟ್ಟ ಹಣದಲ್ಲಿ ಇನ್ನೂ ರು.4850 ಕೋಟಿ ಖರ್ಚಾಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ಕ್ರಮಕೈಗೊಳ್ಳದೆ, ಜನರ ಕಣ್ಣಿಗೆ ಮಣ್ಣೆರಚಲು ತಾವು ಅಹಿಂದ ಪರ ಎನ್ನುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಮಟ್ಕಾ, ಲಾಟರಿ, ಓಸಿ ದಂಧೆಗಳು ಪೊಲೀಸರ ಆಶ್ರಯದಲ್ಲಿಯೇ ನಡೆಯುತ್ತಿವೆ. ಐಜಿಪಿ, ಎಸ್‍ಪಿ ಸೇರಿದಂತೆ ಅನೇಕ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಇದನ್ನು ಸಿಬಿಐಗೆ ವಹಿಸಲಿ. ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರ ಬೆಂಬಲಿಗರು ಅಮಾಯಕ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತಂಗಡಗಿ ಬೆಂಬಲಿಗರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರೆಯಿಂದ ಎದ್ದಿಲ್ಲ ಎಂದು ಟೀಕಿಸಿದ ಪ್ರಹ್ಲಾದ್ ಜೋಷಿಯವರು, ತಂಗಡಗಿಯವರ ವಿರುದ್ಧ ಹೋರಾಟ ನಡೆಸಲು ಯೋಜಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಮಾಜಿ ಶಾಸಕ ನಿರ್ಮಲ್‍ಕುಮಾರ್ ಸುರಾನ, ಸೋಮಣ್ಣ ಬೇವಿನ ಮರದ ಇದ್ದರು.
ಹಗರಣ ಮುಚ್ಚಿಹಾಕಲು ಪ್ರಯತ್ನ
ಶಾಸಕ ಮುನಿರತ್ನ ಅವರ ಮನೆಯಲ್ಲಿ ಬಿಬಿಎಂಪಿ ಕಡತಗಳಿದ್ದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಅದೇ ಈತಿ ಸರ್ಕಾರಿ ಎಂಜಿನಿಯರ್ ಒಬ್ಬರು ರು.36 ಲಕ್ಷ ನಗದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಈ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಎಸ್‍ಪಿ ಪರಶುರಾಂ ಅವರನ್ನು ಸರ್ಕಾರ ಏಕಾಏಕಿ ವರ್ಗಾಯಿಸಿದೆ. ಮಂತ್ರಿಯೊಬ್ಬರಿಗೆ ತಲುಪಿಸಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹಣ ಕೊಂಡು ಹೋಗುತ್ತಿದ್ದ ಅಧಿಕಾರಿಯೇ ಹೇಳಿಕೆ ನೀಡಿದ್ದರು.
ವಿಷಯ ಹೀಗಿರುವಾಗ ತನಿಖಾಧಿಕಾರಿಯನ್ನೇ ವರ್ಗಾವಣೆ ಮಾಡಿ ಪ್ರಕರಣ ಮುಚ್ಚಿಹಾಕುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಶೆಟ್ಟರ್ ದನಿಗೂಡಿಸಿದರು. ಈ ಪ್ರಕರಣವನ್ನು ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ ಅವರು, ಹೀಗಾದಾಗ ಮಾತ್ರ ಪ್ರಕರಣದ ನೈಜ ಸಂಗತಿ ಬೆಳಕಿಗೆ ಬರಲು ಸಾಧ್ಯವೆಂದರು.