ಉಸ್ತುವಾರಿ ಸಚಿವರ ಬದಲಾವಣೆ 
ರಾಜಕೀಯ

ಉಸ್ತುವಾರಿ ಸಚಿವರ ಬದಲಾವಣೆಯಿಂದ ಕಾಂಗ್ರೆಸ್ ನಲ್ಲಿ ಅಸಮಾಧಾನ

ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾಗದಿದ್ದ ಅಸಮಾಧಾನದ ಬೆಂಕಿ ಉಸ್ತುವಾರಿ ಹಂಚಿಕೆಯಲ್ಲಿ ಹೊತ್ತಿಕೊಂಡಿದೆ.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾಗದಿದ್ದ ಅಸಮಾಧಾನದ ಬೆಂಕಿ ಉಸ್ತುವಾರಿ ಹಂಚಿಕೆಯಲ್ಲಿ ಹೊತ್ತಿಕೊಂಡಿದೆ. ಅಷ್ಟೇ ಅಲ್ಲ, ಯಾವುದೇ ಕಾರಣವಿಲ್ಲದೆ ರಾಜ್ಯ ಖಾತೆಯ ಸಚಿವೆ ಉಮಾಶ್ರೀ ಅವರಿಗೆ ಸಂಪುಟ ದರ್ಜೆ ನೀಡಿರುವ ಬಗ್ಗೆಯೂ ಪಕ್ಷದಲ್ಲಿ ಅತೃಪ್ತಿ ಹೊಗೆ ಜೋರಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ರಾಜಧಾನಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರನ್ನು ತೆಗೆದು ಆ ಸ್ಥಾನಕ್ಕೆ ಕೆ.ಜೆ ಜಾರ್ಜ್ ಅವರನ್ನು ತಂದು ಕೂರಿಸಿರುವುದು ನಗರದ ಶಾಸಕರು ಕೆಂಡ ಕಾರುವಂತೆ ಮಾಡಿದೆ.

ಹಾಗೆಯೇ ಸ್ವತಃ ಸಚಿವ ರಾಮಲಿಂಗಾ ರೆಡ್ಡಿ ಅವರಿಗೇ ಈ ಬೆಳವಣಿಗೆ ತೀರಾ ಅಸಮಾಧಾನ ತಂದಿದೆ. ಇನ್ನು ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡರು ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದರೂ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡದಿರುವ ಬಗ್ಗೆ ಬೇಸರ ವ್ಯಕ್ತವಾಗಿದೆ.

ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ಕಸಿದುಕೊಂಡಿರುವುದು ಸಚಿವ ಯುಟಿ ಖಾದರ್ ಗೆ ಬೇಸರ ಮೂಡಿಸಿದ್ದು ಅವರು ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಕೈಗೆ ಸಿಗದ ಸಚಿವರು: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಬೆಂಗಳೂರು ಅಭಿವೃದ್ಧಿ ಮತ್ತು ಬಿಬಿಎಂಪಿ ಕುರಿತ ಖಾತೆಗಳನ್ನು ವಹಿಸಿಕೊಳ್ಳುತ್ತಿದ್ದಂತೆ ಬೆಂಗಳೂರು ನಗರ ಉಸ್ತುವಾರಿಯನ್ನೂ ವಹಿಸಲಾಗಿದೆ. ಡಾ. ಜಿ.ಪರಮೇಶ್ವರ್‍ಗೆ ಅವಕಾಶ ನೀಡಲು ಜಾರ್ಜ್ ಅವರಿಗೆ ಬೆಂಗಳೂರು ಸಂಬಂಧಿಖಾತೆಗಳನ್ನು ನೀಡಿರುವುದು ಅನಿವಾರ್ಯವಾಗಿರಬಹುದು. ಆದರೆ, ಉಸ್ತುವಾರಿಯನ್ನೂ ಜಾರ್ಜ್‍ಗೇ ವಹಿಸುವ ಅಗತ್ಯ ಇರಲಿಲ್ಲ ಎಂಬುದು ಕಾಂಗ್ರೆಸ್ ನಗರ ಶಾಸಕರ ಬೇಸರ.

ಸಚಿವ ರಾಮಲಿಂಗಾ ರೆಡ್ಡಿ ಅವರು ಪಾಲಿಕೆ ಸದಸ್ಯರಾಗಿದ್ದವರು. ಬೆಂಗಳೂರಿನ ಕಸ, ಚರಂಡಿ, ರಸ್ತೆ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಆಳವಾಗಿ ತಿಳಿದವರು. ನಗರ ಉಸ್ತುವಾರಿ
ಯಲ್ಲಿ ಪಳಗಿದವರು. ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ, ಶಾಸಕರಿಗೆ ಮತ್ತು ಪಾಲಿಕೆ ಸದಸ್ಯರ ಸಂಪರ್ಕಕ್ಕೆ ಸಿಗುವವರು. ಆದರೆ, ಸಚಿವ ಜಾರ್ಜ್ ಅವರಿಗೆ ಬೆಂಗಳೂರಿನ ನಾಗರಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಇಂಥವರಿಗೆ ಉಸ್ತುವಾರಿ ನೀಡಿದರೆ ಹೇಗೆ ಎಂಬುದು ರಾಮಲಿಂಗಾ ರೆಡ್ಡಿ ಸಮೀಪವರ್ತಿ ಶಾಸಕರ ಆಕ್ಷೇಪ.
ಇದರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರಿಗೆ ದಿಢೀರ್ ಸಂಪುಟ ಸ್ಥಾನನೀಡಿರುವ ಬಗ್ಗೆ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡರಿಗೆ ಬೇಸರವಾಗಿದೆ. ಇವರನ್ನು ಬೆಂಬಲಿಸುವ ಕೆಲವು ಶಾಸಕರೂ ಅತೃಪ್ತಿ ತೋಡಿಕೊಂಡಿದ್ದಾರೆ. ಸಚಿವೆ ಉಮಾಶ್ರೀ ತಮ್ಮ ಖಾತೆಗಳ ನಿರ್ವಹಣೆಯಲ್ಲಿ ಕಳಪೆ ಸಾಧನೆ ಮಾಡಿದ್ದಾರೆ ಎಂಬುದು ಪಕ್ಷದಲ್ಲೇ ಚರ್ಚೆಯಾಗಿದೆ. ಹಾಗಿದ್ದರೂ ಅವರಿಗೆ ಯಾವುದೇ ಕಾರಣವಿಲ್ಲದೆ ಸಂಪುಟ ದರ್ಜೆ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಸಚಿವರಿಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT