ರಾಜಕೀಯ

ದೇಗುಲಗಳಲ್ಲಿ ಪೂಜೆಗೂ ದುಡ್ಡಿಲ್ಲ!

Srinivasamurthy VN

ವಿಧಾನ ಪರಿಷತ್: ಹೌದು, ಅನೇಕ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆಗೆ ದುಡ್ಡಿಲ್ಲ! ಹೀಗೆಂದು ಮುಜರಾಯಿ ಸಚಿವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ದಯಾನಂದ ಸದನದ ಗಮನ ಸೆಳೆದರು.

ದೇವರಿಗೆ ದೀಪ ಹಚ್ಚಲು ಎಣ್ಣೆ, ಊದುಬತ್ತಿಗೂ ಆದಾಯವಿಲ್ಲ. ಸರಿಯಾದ ಪೂಜಾ ಕಾರ್ಯಗಳು ಇಲ್ಲವಾಗಿದೆ ಎಂದು ಹೇಳಿದ ದಯಾನಂದ್, ಕೂಡಲೇ ಸರ್ಕಾರ ಇತ್ತ ಗಮನಹರಿಸ ಬೇಕೆಂದು  ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯನ ಕಾಳಜಿಯನ್ನು ಪ್ರತಿಪಕ್ಷ ಸದಸ್ಯರು ಬೆಂಬಲಿಸಿದರು.

ಈ ವೇಳೆ ಮಾತನಾಡಿದ ಮುಜರಾಯಿ ಸಚಿವ ಮನೋಹರ ಎಚ್.ತಹಶೀಲ್ದಾರ್, ಸದಸ್ಯರು ಪ್ರಸ್ತಾಪಿಸಿರುವ ಸಂಗತಿ ನಿಜ. ಕೆಲವು ಕಡೆ ಇಂತಹ ಪರಿಸ್ಥಿತಿ ಇದೆ ಎಂದರು. ಮುಜರಾಯಿ  ಇಲಾಖಾ ವ್ಯಾಪ್ತಿಯಲ್ಲಿ ಮೂರು ವರ್ಗದ ದೇವಸ್ಥಾನಗಳು ಬರುತ್ತವೆ. ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳು `ಎ' ಕೆಟಗರಿಯಲ್ಲಿ ಬರಲಿದ್ದು, ರಾಜ್ಯದಲ್ಲಿ ಇಂತಹವು 160 ಸಂಖ್ಯೆಯಲ್ಲಿದೆ. ಇನ್ನು 5ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ 154 ದೇವಸ್ಥಾನಗಳನ್ನು `ಬಿ' ಕೆಟಗರಿಯಲ್ಲಿ ಬರುತ್ತವೆ. 34229 ದೇವಸ್ಥಾನಗಳು 5 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಸ್ಥಾನಗಳು. ಒಟ್ಟಾರೆ ರಾಜ್ಯದಲ್ಲಿ 34543 ದೇವಸ್ಥಾನಗಳು ಇಲಾಖೆಯಡಿ ಬರುತ್ತವೆ ಎಂದರು.

ಎ ಕೆಟಗರಿ ದೇವಸ್ಥಾನಗಳ ಆದಾಯದಲ್ಲಿ ಶೇ.10ರಷ್ಟನ್ನು ಮತ್ತು ಬಿ ಕೆಟಗರಿಯಲ್ಲಿ ಬರುವ ದೇವಸ್ಥಾನಗಳ ಶೇ.5ರಷ್ಟು ಆದಾಯವನ್ನು ನಿಧಿ ರೂಪದಲ್ಲಿ ಕ್ರೋಢೀಕರಣ ಮಾಡಿ ದೇವಸ್ಥಾನಗಳ  ಅಭಿವೃದ್ಧಿಗೆ ಬಳಸಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಮುಜರಾಯಿ ದೇವಸ್ಥಾನಗಳಿಂದ 48390.24 ಲಕ್ಷ ರು. ಆದಾಯ ಬಂದಿದ್ದು, 45571.94 ಲಕ್ಷ ರು. ಅನುದಾನವನ್ನು ವೆಚ್ಚ ಮಾಡಲಾಗಿದೆ  ಎಂದರು. ಪೂಜೆಗೆ ತೊಂದರೆಯಾಗುತ್ತಿರುವ ದೇವಸ್ಥಾನಗಳಿಗೆ ಕೂಡಲೇ ತಸ್ತೀಕ್ ಹಣವನ್ನು ಬಿಡುಗಡೆ ಮಾಡಬೇಕೆಂಬ ಸದಸ್ಯರ ಒತ್ತಾಯವನ್ನು ಒಪ್ಪಿದ ಸಚಿವರು, ಕೂಡಲೇ ಕಡತ ತರಿಸಿ  ಪರಿಶೀಲಿಸುವುದಾಗಿ  ಭರವಸೆ ನೀಡಿದರು. ಸರ್ಕಾರಕ್ಕೆ ದೇವಸ್ಥಾನಗಳ ನಿರ್ವಹಣೆ ಸಾಧ್ಯವಾಗದೇ ಇದ್ದರೆ ಗ್ರಾಮಗಳಿಗೆ, ಗ್ರಾಮ ಪಂಚಾಯಿತಿಗಳಿಗಾದರೂ ವಹಿಸಲಿ ಎಂದು ನ್ಯಾಯಾಲಯ  ಹೇಳಿದೆ.

ಸರ್ಕಾರ ಅದರಂತೆ ನಡೆಯಲಿ ಎಂದು ಸದಸ್ಯರು ಸಲಹೆ ನೀಡಿದರೆ, ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ದೇವಸ್ಥಾನಗಳಿಗೆ ಹಣ ಬಿಡುಗಡೆ ವಿಚಾರದಲ್ಲಿ ಒಂದು ಖಾಯಿಲೆ ಇದೆ. ಹೊಸ  ಕಾರ್ಯಕ್ರಮಗಳನ್ನು ಆಯೋಜಿಸಿ ಪೂಜಾದಿಗಳು ನಿರಂತರವಾಗಿ ನಡೆಸಲು ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು. ಹಿರಿಯ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ದೀಪ ಹಚ್ಚಲು ಹಣವಿಲ್ಲ, ಊದುಕಡ್ಡಿಗೂ ಕಾಸಿಲ್ಲ ಎಂದಾದರೆ ಅಂತಹ ದೇವರಗಳನ್ನು ಏಕೆ ಇಟ್ಟು-ಕೊಂಡಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ನಡೆಯಿತು.

ದೇವಸ್ಥಾನಕ್ಕೆ ಹಣ ಕೊಡುವಂತಿಲ್ಲ
ಶಾಸಕರ ನಿಧಿಯಲ್ಲಿ ದೇವಸ್ಥಾನಗಳಿಗೆ ಹಣ ಕೊಡಲು ಅವಕಾಶವಿಲ್ಲ ಎಂಬ ಪ್ರತಿಪಕ್ಷಗಳ ಸದಸ್ಯರ ಕೂಗಿಗೆ ಮುಖ್ಯಮಂತ್ರಿ ದನಿಯಾದರು. ಪ್ರಾರ್ಥನಾ ಮಂದಿರಗಳಿಗೆ ಕೊಡಬಹುದೆಂದು ನಮ್ಮ   ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ದೇವಸ್ಥಾನ, ಚರ್ಚ್, ಮಸೀದಿಗಳಿಗೂ ಹಣಕೊಡಲು ಅವಕಾಶವಿದೆ ಎಂದರು. ಆದರೆ, ಪ್ರಾರ್ಥನಾ ಮಂದಿರ ಎಂದು ಆದೇಶವಿರುವುದರಿಂದ  ದೇವಸ್ಥಾನಗಳಿಗೆ ಹಣ ನೀಡಲು ಆಗುತ್ತಿಲ್ಲ ಎಂದು ವಸ್ತುಸ್ಥಿತಿ ವಿವರಿಸಿದರು. ಕೂಡಲೇ ಆದೇಶದಲ್ಲಿ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್ ಎಂದು ಬದಲಿಸಲು ಕ್ರಮಕೈಗೊಳ್ಳಲಾಗುತ್ತದೆ  ಎಂದು ಸಿಎಂ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

SCROLL FOR NEXT