ನವದೆಹಲಿ: ಬಿಹಾರ ಚುನಾವಣೆಗೂ ಮುನ್ನ ಸಂಸತ್ ನಲ್ಲಿ ಜಿಎಸ್ ಟಿ ಮಸೂದೆಗೆ ಬೆಂಬಲ ಘೋಷಿಸಿದ್ದ ಜೆಡಿಯು ಚುನಾವಣೆ ಫಲಿತಾಂಶದ ಬಳಿಕ ತನ್ನ ನಿಲುವು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ.
ಸಂಸತ್ ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಜಿಎಸ್ ಟಿ ಮಸೂದೆಗೆ ಸಂಬಂಧಿಸಿದಂತೆ ಜೆಡಿಯು ಪ್ರತಿಪಕ್ಷಗಳ ನಿಲುವನ್ನು ಬೆಂಬಲಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಜಿಎಸ್ ಟಿ ಕಾಯ್ದೆ ಜಾರಿಯಿಂದ ಬಿಹಾರದಂತಹ ಗ್ರಾಹಕ ರಾಜ್ಯಗಳಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಜೆಡಿಯು ಸಹ ಎನ್.ಡಿ.ಎ ಸರ್ಕಾರದ ಜಿಎಸ್ ಟಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿತ್ತು.
ಬಿಹಾರದಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ಬಿಜೆಪಿ ಬಿರುದ್ಧ ಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಜಿಎಸ್ ಟಿ ಮಸೂದೆ ಬೆಂಬಲಿಸುವ ಬಗ್ಗೆ ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ ಎಂದು ಜೆಡಿಯು ನಾಯಕರು ಹೇಳಿದ್ದಾರೆ. ಬಿಹಾರ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಸೇರಿದ್ದು, ಸಂಸತ್ ನಲ್ಲಿ ಜಿಎಸ್ ಟಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಯು ಸಹ ತನ್ನ ನಿಲುವನ್ನು ಬದಲಿಸುವ ಸಾಧ್ಯತೆ ಇದೆ. ನವೆಂಬರ್ 26 ರಂದು ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದ್ದು ಕೇಂದ್ರ ಸರ್ಕಾರ ಜಿಎಸ್ ಟಿ ಮಸೂದೆಯನ್ನು ಮಂಡಿಸಲಿದೆ.