ರಾಜಕೀಯ

ಲೋಕಾಯುಕ್ತ ಪದಚ್ಯುತಿ: ಸಿಜೆಗೆ ನಿರ್ಣಯ ರವಾನಿಸಲು ಸಿದ್ಧತೆ

Srinivas Rao BV

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಪದಚ್ಯುತಿಗೊಳಿಸುವ ಶಾಸಕಾಂಗದ ಪ್ರಯತ್ನ ಅಂತಿಮ ಹಂತ ತಲುಪಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ರವಾನೆಯಾಗಲು ಕ್ಷಣಗಣನೆ ಆರಂಭವಾಗಿದೆ.
ಮಂಗಳವಾರ ನಡೆದಮಹತ್ವದ ಬೆಳವಣಿಗೆಯಲ್ಲಿ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ವಿಧಾನಮಂಡಲದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬೇಕೆಂಬ ಎರಡೂ ಸದನಗಳ ನಿರ್ಣಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಬೆಳವಣಿಗೆಯ ಮೂಲಕ ಎರಡೂ ಸದನಗಳ ಮುಖ್ಯಸ್ಥರು ಲೋಕಾಯುಕ್ತರ ಪದಚ್ಯುತಿ ಮಾಡಬೇಕೆಂಬ ಶಾಸಕರ ಪ್ರಸ್ತಾವ ಅಂಗೀಕರಿಸಿ ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಂತೆ ಆಗಿದೆ.
ಹಾಗೆಯೇ ಲೋಕಾಯುಕ್ತರ ಪದಚ್ಯುತಿ ಕುರಿತಾಗಿ ಶಾಸಕರು ನೀಡಿರುವ ದಾಖಲೆ ಅಡಕಗಳು ಪ್ರಸ್ತಾವನೆಯನ್ನು ಕೂಲಂಕಷವಾಗಿ ಇನ್ನೊಮ್ಮೆ ಪರಿಶೀಲಿಸುವ ಜೊತೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆಸಲ್ಲಿಸಬೇಕಾದ ಸೂಕ್ತಪತ್ರ, ಅಡಕಗಳ ಬಗ್ಗೆ ತಯಾರಿಮಾಡಿಕೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಎರಡೂ ಸದನದ ಮುಖ್ಯಸ್ಥರು ತಿಳಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಗೋಡು ತಿಮ್ಮಪ್ಪ, ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಲಿದ್ದಾರೆ. ಲೋಕಾಯುಕ್ತರ ಮೇಲಿನ ಆರೋಪಗಳು ಸಾಬೀತಾಗುವಂತೆ ಪಕ್ಕಾ ದಾಖಲೆಗಳನ್ನು ಎತ್ತಿ ತೋರಿಸುವಂತೆ ನಾವು ವರದಿ ಸಲ್ಲಿಸಬೇಕಾಗಿದೆ. ಆದಷ್ಟು ಶೀಘ್ರವಾಗಿ ಪ್ರಕ್ರಿಯೆ ನಡೆಯುತ್ತದೆ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ಉತ್ತರ ಬಂದ ನಂತರ ಸದನದಲ್ಲಿ ತಿಳಿಸಿ ರಾಜ್ಯಪಾಲರಿಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು. ಈ ವೇಳೆ ಮಾತನಾಡಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಎರಡೂ ಸದನದಲ್ಲಿ ಏಕಕಾಲಕ್ಕೆ ಅರ್ಜಿ ಕೊಟ್ಟಿದ್ದರಿಂದ ಒಟ್ಟಿಗೆ ಸಭೆ ನಡೆಸಿದ್ದೇವೆ. ಈಗಾಗಲೇ ಈ ವಿಚಾರವಾಗಿ ಮೂರು ಸಭೆ ನಡೆಸಿದ್ದು, ಅಂತಿಮ ತೀರ್ಮಾನ ಕೈಗೊಂಡಿದ್ದೇವೆ ಎಂದರು.

SCROLL FOR NEXT