ಬೆಂಗಳೂರು: ತಮ್ಮನ್ನು ಏಜೆಂಟರು ಎಂದು ಕರೆದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕ ಚೆಲುವರಾಯಸ್ವಾಮಿ ಅವರು, 'ನಾವು ಯಾವ ಪಕ್ಷದ ಮತ್ತು ಯಾರ ಏಜೆಂಟರೂ ಅಲ್ಲ' ಎಂದು ಹೇಳಿದ್ದಾರೆ.
ಇಂದು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರು ನಿಜವಾದ ನಾಯಕರಂದೆ ವರ್ತಿಸಲಿ. ಹಗುರವಾಗಿ ಮಾತನಾಡುವುದನ್ನು ಬಿಡಲಿ. ನಾವು ಪಕ್ಷದ ಮತ್ತು ಯಾರ ಏಜೆಂಟರೂ ಅಲ್ಲ. ದೇವೇಗೌಡರ ಸೂಚನೆಯಂತೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೇವು. ಆದರೆ ಮಾರನೇ ದಿನ ದೇವೇಗೌಡರು ನಾನು ಹೇಳಿಲ್ಲ ಅಂತ ಏಕೆ ಹೇಳಿದರೊ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆ ನಡೆಸಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಚೆಲುವರಾಯ ಸ್ವಾಮಿ ವಿರುದ್ಧ ನಿನ್ನೆ ಪರೋಕ್ಷ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ, ಪಕ್ಷದ ಕೆಲುವು ಶಾಸಕರು ಕಾಂಗ್ರೆಸ್ ಜೊತೆ ಮೈತ್ರಿಗೆ ಒಲವು ತೋರಿದ್ದು, ಅವರು ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆದರೆ, ಮೂರು ನಾಲ್ಕು ಮಂದಿಗಾಗಿ ಪಕ್ಷ ಬಲಿಕೊಡಲು ನಾನು ಸಿದ್ಧವಿಲ್ಲ ಎಂದಿದ್ದರು. ಅಲ್ಲದೆ ಮೈತ್ರಿ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಿಡಿಕಾರಿದ್ದರು.
ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಚ್ಡಿಕೆ ಸ್ಪಷ್ಟಪಡಿಸಿದ್ದರು.