ಬೆಂಗಳೂರು: ರಾಜ್ಯದಲ್ಲಿ ಜನವರಿಯಿಂದ ಎಲ್‍ಇಡಿ ಬಲ್ಬ್ ಭಾಗ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲ, ಅಗತ್ಯಬಿದ್ದರೆ ರಾಜ್ಯದಲ್ಲಿ ಎಲ್ ಇಡಿ ಬಲ್ಬ್ ಬಳಕೆ ಕಡ್ಡಾಯಗೊಳಿಸುವುದಕ್ಕೂ ಸರ್ಕಾರ ಆಲೋಚನೆ ಮಾಡಿದೆ. ರಾಜ್ಯದಲ್ಲಿ ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಗ್ರಾಹಕರು ಎಲ್ ಇಡಿ ಬಲ್ಬ್‍ಗಳನ್ನು ಬಳಸುವಂತೆ ಮಾಡಲಾಗುತ್ತದೆ. ಅಗತ್ಯವಾದರೆ ಇದನ್ನು ಕಡ್ಡಾಯ ನಿಯಮವಾಗುವಂತೆಯೂ ಮಾಡಲಾಗುತ್ತದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ಎಲ್‍ಇಡಿ ಬಲ್ಬ್ ಉತ್ಪಾದಕ ಸಂಸ್ಥೆಗಳ ಜತೆ ಸಭೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬೀದಿ ದೀಪಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರತಿ ಮನೆಗಳಿಗೆ 10 ಬಲ್ಬ್‍ಗಳಂತೆ 6 ಕೋಟಿ ಬಲ್ಬ್‍ಗಳನ್ನು ಬದಲಿಸಬೇಕಿದೆ. ಮಾರುಕಟ್ಟೆಯಲ್ಲಿ ಸದ್ಯ ಒಂದು ಎಲ್‍ಇಡಿ ಬಲ್ಬ್ ದರ ರು.400 ವರೆಗೂ
ಇದೆ. ಆದರೆ ಈ ದರದಲ್ಲಿ ಗ್ರಾಹಕರು ಬಲ್ಬ್ ಖರೀದಿಸುವುದು ಕಷ್ಟ ಸಾಧ್ಯ ಎನ್ನುವ ಕಾರಣಕ್ಕೆ ಸರ್ಕಾರವೇ ಅವರಿಗೆ ಬಲ್ಬ್ ನೀಡಲು ಮುಂದಾಗಿದೆ ಎಂದರು. ಬಲ್ಬ್ ಪೂರೈಸುವುದಕ್ಕಾಗಿ ಅನೇಕಕಂಪನಿಗಳು ಮುಂದೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಶಿಯನ್ಸ್ ಸರ್ವಿಸ್ ಲಿಮಿಟೆಡ್ ಎಂಬ ಸಂಸ್ಥೆ ನೇತೃತ್ವ ವಹಿಸಿದೆ. ಆದರೆ ರಾಜ್ಯದಲ್ಲಿ
ವ್ಯಾಟ್ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಆಕ್ಷೇಪ ಎತ್ತಿದ್ದು, ಅದರ ಪ್ರಮಾಣ ಕಡಿಮೆ ಮಾಡಿದರೆ ಈ ಕಂಪನಿಗಳು ಬಲ್ಬ್ ಪೂರೈಸಲು ಒಪ್ಪಿಕೊಂಡಿವೆ. ಆದ್ದರಿಂದ ಈ ಬಗ್ಗೆ
ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.
ಬಲ್ಬ್ ಹಣ ಕಂತಿನ ಪ್ರಕಾರ ವಸೂಲಿ: ಎಲ್ ಇಡಿ ಬಲ್ಬ್‍ಗಳನ್ನು ಸರ್ಕಾರವೇ ಟೆಂಡರ್ ಮೂಲಕ ಖರೀದಿಸಿ ಎಸ್ಕಾಂಗಳ ಮೂಲಕ ಗ್ರಾಹಕರಿಗೆ ಹಂಚಿಕೆ ಮಾಡುವ ಬಗ್ಗೆ ಚಿಂತನೆ
ಇದೆ. ಇದಕ್ಕೆ ಸಂಪುಟ ಒಪ್ಪಿದರೆ ಗ್ರಾಹಕರಿಗೆ ರು. 400ರ ದರದ ಬಲ್ಬ್‍ಗಳನ್ನು ರು.100 ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ. ಆ ಹಣವನ್ನು ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆಯುವ ಸಮಯದಲ್ಲಿ ತಿಂಗಳಿಗೆ ರು.10ನಂತೆ ಪಡೆಯಲಾಗುತ್ತದೆ. ಈ ಮೂಲಕ ಇಡೀ
ರಾಜ್ಯದ ಎಲ್ಲ ಗ್ರಾಹಕರು ಎಲ್‍ಇಡಿ ಬಲ್ಬ್ ಬಳಸುವಂತೆ ಮಾಡಲಾಗುವುದು ಎಂದು ವಿವರಿಸಿದರು.