ರಾಜಕೀಯ

ಗೋ ಭಕ್ಷಣಾ ಆಯೋಗ ರಚಿಸಲಿ

Rashmi Kasaragodu
ಬೆಂಗಳೂರು: `ಗೋ ಸೇವಾ ಆಯೋಗವನ್ನು ರದ್ದು ಮಾಡಿರುವ ರಾಜ್ಯ ಸರ್ಕಾರವು ಗೋ ಭಕ್ಷಣಾ ಆಯೋಗ ರಚಿಸಲಿ. ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನೇ ಆ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಿ. ಉಳಿದಂತೆ ಸಿಎಂ ಪರಿವಾರದ ಸಾಹಿತಿಗಳನ್ನು ನಿರ್ದೇಶಕರನ್ನಾಗಿ ಮಾಡಲಿ' ಎಂದು ಬಿಜೆಪಿ ಗಂಭೀರವಾಗಿ ಟೀಕಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ  ಕಾರ್ಯದರ್ಶಿ ಸಿ.ಟಿ.ರವಿ, `ಸಿಎಂ ಮಾಧ್ಯಮ ಸಲಹೆಗಾರ ಮಟ್ಟು ಅವರು ಗೋಮಾಂಸ ಸಾರ್ವಜನಿಕ ಭಕ್ಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅದನ್ನು ಬೆಂಬಲಿಸಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿ- ದ್ದಾರೆ. ಸರ್ಕಾರದ ಸೌಲತ್ತು ಪಡೆಯುತ್ತಿರುವ ಸಚಿವರ ಸ್ಥಾನಮಾನ ಹೊಂದಿರುವ ಮುಖ್ಯಮಂತ್ರಿ ಮಾಧ್ಯಮ  ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರು ಈ ರೀತಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಸಿಎಂ ಕಚೇರಿಯಿಂದಲೇ ಪ್ರಚೋದನೆ ಕೆಲಸ ನಡೆಯುತ್ತಿರುವುದು ದುರದೃಷ್ಟಕರ' ಎಂದರು.
`ಗೋ ಸೇವಾ ಆಯೋಗದ ಬದಲು ಗೋ ಭಕ್ಷಣಾ ಆಯೋಗವನ್ನು ರಚಿಸಲಿ, ಗೋ ಭಕ್ಷಣೆ ಕುರಿತು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮತ್ತು ಪ್ರಚಾರ ಮಾಡಲಿ. ಹೇಗಿದ್ದರೂ ಮಾಧ್ಯಮ ಸಲಹೆಗಾರರ ಹುದ್ದೆಯಿಂದ ಅಮೀನ್ ಮಟ್ಟು ಅವರಿಗೂ ಉಪಯೋಗವಿಲ್ಲ. ಸರ್ಕಾರಕ್ಕೂ ಉಪಯೋಗವಿಲ್ಲ' ಎಂದು ಟೀಕಿಸಿದ ಸಿ.ಟಿ.ರವಿ, 1964ರ ಗೋ ಹತ್ಯಾ ನಿಷೇಧ ಕಾಯ್ದೆ ಅನ್ವಯ ರಾಜ್ಯದಲ್ಲಿ ಹಸುವಿನ ವಧೆ ಮಾಡುವಂತಿಲ್ಲ, ಕರುವಿನ ವಧೆಯನ್ನೂ ಮಾಡುವಂತಿಲ್ಲ. ಎತ್ತು, ಕೋಣ, ಎಮ್ಮೆ ವಧೆ ಮಾಡಬೇಕೆಂದರೆ ಅಧಿಕೃತ ಕಸಾಯಿ ಖಾನೆಯಲ್ಲಿ ಪಶುಸಂಗೋಪನೆ ಇಲಾಖೆ ವೈದ್ಯರು ಪ್ರಮಾಣಪತ್ರ ನೀಡಿದ ನಂತರ ವಧೆ ಮಾಡಲು ಅವಕಾಶವಿದೆ. ಹೀಗಿರುವಾಗ ದಿನೇಶ್ ಅಮೀನ್ ಮಟ್ಟು ಅವರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಭಕ್ಷಿಸಿದ ಗೋ ಮಾಂಸ ಯಾವ ಅಂಗಡಿಯಿಂದ ತಂದಿದ್ದು, ಯಾವ ಗೋವನ್ನು ಹತ್ಯೆ ಮಾಡಲಾಯಿತೆಂಬುದರ ತನಿಖೆಯೂ ನಡೆಸಲಿ, ಸರ್ಕಾರ ಈ ಬಗ್ಗೆ ಉತ್ತರಿಸಲಿ ಎಂದರು. ಮುಖ್ಯಮಂತ್ರಿಯವರಿಗೆ ದಿನೇಶ್ ಅಮೀನ್ ಮಟ್ಟು ನಡವಳಿಕೆ ಬಗ್ಗೆ ಬೆಂಬಲ ಇಲ್ಲದೇ ಇದ್ದರೆ ತಕ್ಷಣವೇ ಅವರನ್ನು ವಜಾ ಮಾಡುವ ಮೂಲಕ ಸೌಹಾರ್ದತೆ ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇನೆ ಎಂದರು.
SCROLL FOR NEXT