ಹಾವೇರಿ: ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ದಲಿತ ಮುಖಂಡರನ್ನು ಸಿಎಂ ಮಾಡಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಚಲವಾದಿ ನಾರಾಯಣಸ್ವಾಮಿ ಮನವಿ ಪತ್ರ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯನವರ ಜನಪ್ರಿಯ ಯೋಜನೆಗಳಿಂದಾಗಿ ಪಕ್ಷಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ರಾಹುಲ್ ಗಾಂಧಿಗೆ ಸಲ್ಲಿಸಿರುವ ಪತ್ರದಲ್ಲಿ ಆರೋಪಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಅಲ್ಲದೇ ಸಿಎಂ ಆಗಿ ಸಿದ್ದರಾಮಯ್ಯ ಎರಡೂವರೆ ವರ್ಷ ಕಾಲ ಕಳೆದಿದ್ದಾರೆ, ಇನ್ನು ಉಳಿದ ಎರಡೂ ವರೆ ವರ್ಷ ದಲಿತ ಸಿಎಂ ಬೇಕು ಎದು ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಅವರ 125ನೇ ಜನ್ಮ ದಿನದಂದು ದಲಿತ ಸಿಎಂ ಅನ್ನು ನಿಯೋಜಿಸಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ. ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಯಾವುದೇ ದಲಿತ ಮುಖಂಡರಿಗೆ ಸಿಎಂ ಪಟ್ಟ ಕೊಡಬಹುದಾಗಿದೆ. ಅದಕ್ಕೂ ಮೊದಲು ಸಿಎಂ ಹುದ್ದೆಯಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯನ್ನು ನೇಮಕ ಮಾಡದಿದ್ದರೆ, ಕಾಂಗ್ರೆಸ್ ಪಕ್ಷ ದಲಿತರ ಆಕ್ರೋಶಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಚಲವಾದಿ ಸಂಘಟನೆ ತಿಳಿಸಿದೆ.