ಬೆಂಗಳೂರು: ಜಿ.ಪಂ.ಮತ್ತು ತಾ.ಪಂ. ಚುನಾವಣೆ ಹಿನ್ನೆಲೆ ಯಲ್ಲಿ ಜೆಡಿಎಸ್ ಸಂಘಟನೆ ಮತ್ತು ಹೋರಾಟ ಸಿದ್ಧತೆಗೆ ಗುರುವಾರ ಚಾಲನೆ ನೀಡಿದೆ. `ಕರ್ನಾಟಕದ ಸಂದೇಶ ಸಮಾವೇಶ' ಹೆಸರಿನಲ್ಲಿ ಜೆಡಿಎಸ್ ರಾಜಧಾನಿ ಬೆಂಗಳೂರಿನಲ್ಲಿ ನಡೆಸಿದ ಪಂಚಾಯಿತಿಗಳ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳ ಸಮಾವೇಶದ ಮೂಲಕ ಪಂಚಾಯಿತಿ ಚುನಾವಣೆ ಕಸರತ್ತಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಅನೇಕ ನಾಯಕರು, ತಮಿಳುನಾಡಿನ ಮಾದರಿಯಲ್ಲಿ ರಾಜ್ಯದಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳನ್ನೂ ತಿರಸ್ಕರಿಸಬೇಕೆಂದು ಪಕ್ಷ ತನ್ನ ಕಾರ್ಯಕರ್ತರಿಗೆ ಸಾರಿ ಹೇಳಿದ್ದಾರೆ. ಅಷ್ಟೇ ಅಲ್ಲ. ಪಕ್ಷವನ್ನು ಬಿಟ್ಟುನ ಹೋದವರನ್ನು ಮತ್ತೆ ಪಕ್ಷಕ್ಕೆ ಬರುವಂತೆಯೂ ಆಹ್ವಾನಿಸಿದ್ದು, ಜನತಾಪರಿವಾರ ಒಂದಾಗುವ ಇಚ್ಛೆಯನ್ನೂ ತೋರಲಾಗಿದೆ. ಆ ಮೂಲಕ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ತರಬೇಕೆನ್ನುವ ವಿನಂತಿಯನ್ನೂ ಮಾಡಿದ್ದಾರೆ. ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪುನಾರಚನೆ ನಿರ್ಧಾರ ಪ್ರಕಟಿಸಿದ ಜೆಡಿಎಸ್ ನಾಯಕರು, ಪಂಚಾಯಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬೇಕಾದವರು ಕಡ್ಡಾಯವಾಗಿ ಸದಸ್ಯತ್ವ ಅಭಿಯಾನ ಮಾಡಬೇಕೆನ್ನುವ ಷರತ್ತು ವಿಧಿಸುವುದನ್ನು ಮರೆಯಲಿಲ್ಲ.
ನಮ್ಮ ಮನೆ ಬಾಗಿಲಿಗೆ ಬಿಜೆಪಿ, ಕಾಂಗ್ರೆಸ್: ರೈತ ಚೈತನ್ಯ ಯಾತ್ರೆ ಮೂಲಕ ಬಿಜೆಪಿ ಪಂಚಾಯಿತಿ ಚುನಾವಣೆ ತಯಾರಿ ನಡೆಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಜೆಡಿಎಸ್ ಈ ಸಮಾವೇಶ ನಡೆಸಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಟೀಕೆಗಳ ಹೊಳೆಯನ್ನೇ ಹರಿಸಿತು. ಮೊದಲಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ತಮಿಳುನಾಡಿನಲ್ಲಿ ದಶಕಗಳಿಂದಲೂ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಲೆ ಎತ್ತದಂತೆ ಮಾಡಲಾಗಿದೆ. ಅಲ್ಲಿ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ರಾಷ್ಟ್ರೀಯ ಪಕ್ಷಗಳನ್ನು ನಿಯಂತ್ರಿಸುತ್ತಿವೆ. ಆ ಮೂಲಕ ನಮ್ಮ ರಾಜ್ಯಕ್ಕೆ ತೊಂದರೆ ನೀಡುತ್ತಿವೆ. ಇದನ್ನು ತಡೆಯಲು ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೇರುವುದು ಅನಿವಾರ್ಯ ಎಂದರು.
ಅಪ್ಪ, ಮಕ್ಕಳ ಪಕ್ಷವಲ್ಲ: ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ನಮ್ಮದು ಅಪ್ಪ, ಮಕ್ಕಳ ಪಕ್ಷವಲ್ಲ. ನಮ್ಮ ಶಕ್ತಿ, ಯುಕ್ತಿಯನ್ನುನಿಮಗೇ ನೀಡುತ್ತೇವೆ. ನೀವೇ ಜವಾಬ್ದಾರಿ ಹೊತ್ತುಕೊಳ್ಳಿ. ಒಟ್ಟಿನಲ್ಲಿ ಪಕ್ಷವನ್ನು ಉಳಿಸಿ ಬೆಳೆಸಿ ಎಂದರು. ಮಾಜಿ ಸಚಿವರಾದ ಅಲ್ಕೋಡ್ ಹನುಮಂತಪ್ಪ, ಚಲುವರಾಯಸ್ವಾಮಿ, ಎಚ್.ಡಿ.ರೇವಣ್ಣ, ಪಕ್ಷದ ರಾಷ್ಟ್ರೀಯ ಪಧಾನ ಕಾರ್ಯದರ್ಶಿ ಜಪ್ರುಲ್ಲಾ, ಬಂಡೆಪ್ಪ ಕಾಶಂಪೂರ್, ಗೋಪಾಲಯ್ಯ, ಉಪ ಮೇಯರ್ ಹೇಮಲತಾ ಭಾಗವಹಿಸಿದ್ದರು.