ರಾಜಕೀಯ

ಖಾಸಗಿ ಕ್ಷೇತ್ರದಲ್ಲೂ ಮೀಸಲು ಅಗತ್ಯ: ಸಿಎಂ

Rashmi Kasaragodu
ಬೆಂಗಳೂರು:  ಖಾಸಗಿ ಕ್ಷೇತ್ರದಲ್ಲೂ ಅವಕಾಶ ವಂಚಿತರಿಗೆ ಮೀಸಲಾತಿ ದೊರಕಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಪ್ರತಿಪಾದಿಸಿದರು.  ಗಾಂಧಿ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮತ್ತು ಸಮ ಸಮಾಜ ವೇದಿಕೆ ಸಂಯುಕ್ತಾಶ್ರಯದಲ್ಲಿ `ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ' ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣ (ಹೊಸ ಆರ್ಥಿಕ ನೀತಿ) ಕ್ಕೆ ಹೆಚ್ಚು ಒತ್ತು ನೀಡಿದ ಮೇಲೆ ಮೀಸಲಾತಿಗೆ ಮಹತ್ವ ಕಡಿಮೆಯಾ
ಗುತ್ತಿದೆ. ಈ ಹೊಸ ಆರ್ಥಿಕ ನೀತಿಯಿಂದ ಖಾಸಗಿ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅಂತೆಯೇ ಸರ್ಕಾರಿ ವಲಯದಲ್ಲಿ ಉದ್ಯೋಗ ಕಡಿಮೆಯಾಗುತ್ತಿದೆ. ಒಂದು ವೇಳೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ದೊರೆಯದಿದ್ದರೆ ಅವಕಾಶ ವಂಚಿತರಿಗೆ ಅನ್ಯಾಯವಾಗುತ್ತದೆ. ಈ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿ  ಮಾಯಾವತಿಯವರು ಖಾಸಗಿ ವಲಯ-ದಲ್ಲಿ ಮೀಸಲಾತಿ ಕಲ್ಪಿಸುವ ಸಾಹಸಕ್ಕೆ ಕೈ ಹಾಕಿದ್ದರು. ಆದರೆ, ಇದರ ವಿರುದ್ಧ ಪ್ರಕರಣ ದಾಖಲಾಗಿ ಸುಪ್ರಿಂಕೋರ್ಟ್‍ವರೆಗೂ ಹೋಯಿತು. ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕುರಿತಂತೆ ರಾಷ್ಟ್ರ ಮಟ್ಟ-ದಲ್ಲಿ ಚಿಂತನೆಯಾಗಬೇಕೆಂದರು. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಎಸ್. ಆರ್.ನಾಯಕ್ ಮಾತನಾಡಿ, ಶತಮಾನಗಳಿಂದ ತುಳಿತಕ್ಕೊಳಗಾದವರಿಗೆ ಸಂವಿಧಾನ ಕಲ್ಪಿಸಿರುವ ಮೀಸಲಾತಿಗೆ ಅಡ್ಡಗಾಲು ಹಾಕುವವರು ಹೆಚ್ಚಾಗುತ್ತಿದ್ದಾರೆ. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದ್ದು, ರಾಷ್ಟ್ರ ನಾಯಕರು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ಸಲಹೆ ಮಾಡಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಸಂಸದ ಚಂದ್ರಪ್ಪ ಉಪಸ್ಥಿತರಿದ್ದರು.
SCROLL FOR NEXT