ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಮಾಂಸ ಭಕ್ಷಣೆ ಕುರಿತು ನೀಡಿದ ಹೇಳಿಕೆ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ ದ ಅವರು, ಮತಬ್ಯಾಂಕ್ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ನಂಬಿಕೆಗೆ ದ್ರೋಹ ಬಗೆಯುವ ಮಾತನಾಡಿದ್ದಾರೆ. ಪ್ರತಿ ಧರ್ಮದ ಜನರಿಗೆ ಅವರದ್ದೇ ಆದ ನಂಬಿಕೆಗಳಿವೆ. ಆ ನಂಬಿಕೆಗೆ ದ್ರೋಹ ಬಗೆಯುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ರಾಜಕೀಯ ಹೋರಾಟ ಮಾಡಲಾಗುವುದು.
ಪಕ್ಷದಲ್ಲಿ ಕೆಲವರು ಕಾನೂನು ಹೋರಾಟವನ್ನೂ ಮಾಡಲಿದ್ದಾರೆ. ಈ ಬಗ್ಗೆ ಕಾನೂನು ಪರಿಣಿತರ ಬಳಿ ಚರ್ಚಿಸಲಿದ್ದೇವೆ ಎಂದರು.ಮುಖ್ಯಮಂತ್ರಿಯಾದವರು ಎಲ್ಲ ಸಮಾಜದ, ವರ್ಗದ ನಾಯಕರಾಗಿರುತ್ತಾರೆ. ಇಂತಹ ಹೇಳಿಕೆ ನೀಡಿ, ಒಂದು ವರ್ಗವನ್ನು ಓಲೈಸಿ ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತ್ನಿಸುತ್ತಿದ್ದಾರೆ ಎಂದು ಶೆಟ್ಟರ್ ವ್ಯಂಗ್ಯವಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, ಮಹಾತ್ಮಾ ಗಾಂಧಿ ಗೋವಿನ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದರು. ಇಂದು ಕಾಂಗ್ರೆಸ್ಸಿನಲ್ಲಿರುವವರು ನಕಲಿ ಗಾಂಧಿವಾದಿಗಳಾಗಿರುವುದರಿಂದ ಇದನ್ನು ಎಲ್ಲರೂ ಮರೆತಿದ್ದಾರೆ. ದೇಶದಲ್ಲಿ ಕೋಟ್ಯಂತರ ಜನ ಗೋವಿನ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದಾರೆ. ಮುಖ್ಯಮಂತ್ರಿಗಳು ಜನರ ಮನಸ್ಸಿಗೆ ನೋವು ಮಾಡುವುದಕ್ಕಿಂತ
ಮತ ಸಿಗುವುದನ್ನೇ ಮುಖ್ಯ ಎಂಬ ನಿಲುವು ತಳೆದಿದ್ದಾರೆ ಎಂದರು.