ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವ ನಿರ್ಧಾರವನ್ನು ಜೆಡಿಎಸ್ ಮುಖಂಡರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಪುನರ್ ಪರಿಶೀಲಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಚುನಾವಣಾ ಫಲಿತಾಂಶ ಸ್ಪಷ್ಟವಾಗಿ ತಿಳಿಸುತ್ತಿರುವಂತೆ ಜನಾಭಿಪ್ರಾಯವು ಕಾಂಗ್ರೆಸ್‍ಗೆ ವಿರುದ್ಧವಾಗಿದೆ. ಚುನಾವಣೆಯನ್ನು ಹೇಗಾದರೂ ತಡೆಯಬೇಕೆಂದು ಕಾಂಗ್ರೆಸ್ ಪಕ್ಷ ಆಡಿದ ಆಟಗಳು ಜನರ ಕಣ್ಣೆದುರಿಗೇ ಇವೆ. ಬೆಂಗಳೂರಿನ ಅವನತಿ ತಡೆಯಬೇಕಿದೆ. ಮಿತಿಮೀರಿದ ಭ್ರಷ್ಟಾ ಚಾರದಿಂದ ಶೋಷಣೆ ಹಾಗೂ ನಗರ ಸಂಪನ್ಮೂಲದ ಲೂಟಿ ತಡೆಗಟ್ಟಲು ಕಾಂಗ್ರೆಸ್ ಪ್ರಯತ್ನಿಸುತ್ತಿಲ್ಲ. ಇಂತಹ ಪಕ್ಷದ ಜೊತೆ ಕೈ ಜೋಡಿಸಬಾರದು ಎಂದು ಕೋರಿದ್ದಾರೆ. ವಿಭಜನೆ ಸೇರಿದಂತೆ ಹಲವು ಕ್ರಮಗಳನ್ನು ಪ್ರಸ್ತಾಪಿಸಿ, ನಗರ ಪಾಲಿಕೆ ದುರ್ಬಲಗೊಳಿಸಲು ಮತ್ತು ರಾಜ್ಯ ಸರ್ಕಾರದ ಕೃಪೆಯಲ್ಲಿ ನಡೆಯುವಂತೆ ಮಾಡಲು ಪ್ರಯತ್ನಿಸುತ್ತಿರುವುದು ತಿಳಿದ ವಿಚಾರ. ಕುಮಾರಸ್ವಾಮಿ ಅವರು ರಾಜ್ಯದ ರೈತರ ದನಿ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ನಿಟ್ಟಿನಲ್ಲೇ ಅವರು ಕೆಲಸ ಮಾಡುತ್ತಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ರಾಜ್ಯದಲ್ಲಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಭೀಕರ ಪರಿಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆ ದಿವ್ಯನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದೊಂದಿಗೆ ಕುಮಾರಸ್ವಾಮಿ ಅವರು ಕೈ ಜೋಡಿಸಿ, ಆ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ನಂಬಲು ಸಾಧ್ಯವಿಲ್ಲ ಎಂದು ಸಂಸದ ರಾಜೀವ್ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.