ಹೆಬ್ಬೂರು (ತುಮಕೂರು ಗ್ರಾಮಾಂತರ): ಬಿಜೆಪಿ ವತಿಯಿಂದ ನಡೆದಿರುವ ರೈತ ಚೈತನ್ಯ ಯಾತ್ರೆ ಗುರುವಾರ ತುಮಕೂರು ಪ್ರವೇಶಿಸಿದ್ದು, ಹೆಬ್ಬೂರು ಹೋಬಳಿಯಲ್ಲಿ ಗುರುವಾರ ಸಮಾವೇಶ ನಡೆಯಿತು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬರ ಪರಿಸ್ಥಿತಿ ಹತೋಟಿಗೆ ತಾರದಿದ್ದರೆ ಜನ ಬಡಿಗೆ ಹಿಡಿದುಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಗುಡುಗಿದರು. ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿದ ಯಡಿಯೂರಪ್ಪ ಬರ ವಿಷಯ ಎತ್ತಿಕೊಂಡೇ ಸರ್ಕಾರವನ್ನು ತಿವಿದರು. ಎಂದೂ ಕಾಣದ ಬರ ವ್ಯಾಪಿಸಿದ್ದು. ಇಂತಿಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಹೀಗಿರುವಾಗ ಮುಖ್ಯಮಂತ್ರಿಯಾದಿಯಾಗಿ ಸಚಿವರು ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿಲ್ಲ. ಈ ಸರ್ಕಾರವನ್ನು ಬಡಿದೆಬ್ಬಿಸಲು ರೈತ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ತಿಂಗಳೊಳಗೆ ಬರ ನೀಗಿಸಲು ಪೂರ್ವಸಿದ್ಧತೆ ನಡೆಸಿಕೊಳ್ಳದಿದ್ದರೆ ರೈತರ ಜತೆಗೂಡಿಬಿಜೆಪಿ ಕಾರ್ಯಕರ್ತರು ಬಡಿಗೆ ಹಿಡಿದು ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ' ಎಂದು ಗುಡುಗಿದರು.
ಕಾಗೋಡು ಮಾತಿಗೆ ಬೆಂಬಲ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸರಿಯಾಗಿಯೇ ದನಿ ಎತ್ತಿದ್ದಾರೆ. ಈ ಸರ್ಕಾರ ಬರಗಾಲವನ್ನು ಪ್ರಾಮಾಣಿಕವಾಗಿ ಪರಿಹರಿಸಲು ಯತ್ನಿಸುತ್ತಿಲ್ಲ ಎಂಬ ಅವರ ಹೇಳಿಕೆಯನ್ನು ತಾವು ಬೆಂಬಲಿಸುತ್ತೇವೆ ಎಂದ ಅವರು, ಇದು ಚುನಾವಣಾ ಸಮಯವಲ್ಲದಿದ್ದರೂ ರೈತಾಪಿ ವರ್ಗ ನಮಗ ಸಾಕಷ್ಟು ರೀತಿಯಲ್ಲಿ ಬೆಂಬಲ ಸೂಚಿಸುತ್ತಿರುವುದನ್ನಾದರೂ ಕಾಂಗ್ರೆಸ್ ಸರ್ಕಾರ ಗಮನವಿಟ್ಟು ನೋಡಬೇಕು ಎಂದು ಹೇಳಿದರು