ಬೆಂಗಳೂರು: ಬಿಬಿಎಂಪಿ ಮೇಯರ್ ಚುಕ್ಕಾಣಿ ಕೈತಪ್ಪುವುದು ಬಹುತೇಕ ಖಚಿತವಾದಂತೆ ನ್ಯಾಯ ಕೇಳಿ ರಾಜಭವನದ ಕದ ತಟ್ಟಲು ಬಿಜೆಪಿ ಮುಂದಾಗಿದೆ.
ಶನಿವಾರ 100 ನೂತನ ಕಾರ್ಪೋರೇಟರ್‍ಗಳು ಮತ್ತು ಪಕ್ಷದ ಮುಖಂಡರು ಬಿಬಿಎಂಪಿಯಿಂದ ರಾಜಭವನದ ವರೆಗೆ ಪರೇಡ್ ನಡೆಸಲಿದ್ದು, ನಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಲಿದ್ದಾರೆ.
198 ಸದಸ್ಯ ಬಲದ ಬಿಬಿಎಂಪಿಯಲ್ಲಿ 100 ಸ್ಥಾನ ಗೆದ್ದಿದ್ದರೂ 76 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಮೇಯರ್ ಸ್ಥಾನಕ್ಕೆ ಅಡ್ಡದಾರಿ ಹಿಡಿದಿದೆ.
ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡುವಂತೆ ರಾಜ್ಯಪಾಲರನ್ನು ಕೋರುವುದು ಬಿಜೆಪಿಯ ಉದ್ದೇಶ. ಈ ನಡುವೆ, ಶುಕ್ರವಾರದಿಂದ ಸಾಮಾಜಿಕ ತಾಣಗಳಲ್ಲಿ ಸರ್ಕಾರದ ವಿರುದ್ಧ ಅಭಿಯಾನ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಂತಹ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ.
ಈ ಮಧ್ಯೆ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಕಾರ್ಪೋರೇಟರ್‍ಗಳ ಖರೀದಿಗೆ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಚೌಡೇಶ್ವರಿ ವಾರ್ಡ್ ಸದಸ್ಯೆ ಪದ್ಮಾವತಿ ಅಮರನಾಥ್ ಅವರಿಗೆ ಬಿಜೆಪಿಯಿಂದ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.