ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚಿದೆ. ದೇವೇಗೌಡರು, ಕುಮಾರಸ್ವಾಮಿ ಏನು ಮಾಡಲು ಸಾಧ್ಯ ಎಂದು ಅಹಂಕಾರ, ಗರ್ವದಿಂದ ಮಾತನಾಡುತ್ತಿದ್ದವರಿಗೆ ಪಕ್ಷದ ವತಿಯಿಂದ ಜಯಶಾಲಿಯಾಗಿರುವ 14 ಸದಸ್ಯರು ಉತ್ತರಿಸಲಿದ್ದಾರೆ.
ರಾಷ್ಟ್ರೀಯ ಪಕ್ಷದ ಪ್ರಮುಖ ಮುಖಂಡರೊಬ್ಬರ ಹೇಳಿಕೆಗೆ ಮಾಡಿ ಪ್ರಧಾನಿ ದೇವೇಗೌಡರು ಟಾಂಗ್ ನೀಡಿದ್ದು ಹೀಗೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಗೆದ್ದಿರುವ 14 ಸ್ಥಾನಗಳನ್ನು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ಗೊಂದಲವಿದೆ. ಇಷ್ಟು ಕಡಿಮೆ ಸ್ಥಾನ ಗೆದ್ದಿದ್ದರೂ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇದರಲ್ಲೇ ತಿಳಿಯುತ್ತಿದೆ ಯಾರ ಪ್ರಭಾವ ಎಷ್ಟಿದೆ ಎಂದು ಹೇಳಿದರು.
ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ:
ಬಿಬಿಎಂಪಿ ಚುನಾವಣೆಯಲ್ಲಿ ನಿರೀಕ್ಷಿಸಿದ ಮಟ್ಟ ದಲ್ಲಿ ನಾವು ಜಯಗಳಿಸಲು ಸಾಧ್ಯ ವಾಗಿಲ್ಲ. ಅಭ್ಯರ್ಥಿಗಳ ಕಷ್ಟ ಏನೆಂ ಬುದು ನನಗೆ ಗೊತ್ತಿದೆ. ಅಭ್ಯರ್ಥಿಗಳ ಭೇಟಿ ಮಾಡಲೆಂದೇ ಈ ಸಭೆ ಕರೆದಿದ್ದೇನೆ. ಸೋತವರು ಎದೆ ಗುಂದಬೇಕಿಲ್ಲ. ನಿಮ್ಮಲ್ಲಿನ ಧೈರ್ಯ, ಸ್ಥೈರ್ಯ ಮತ್ತು ಉತ್ಸಾಹಕ್ಕೆ ಮುಂದೊಂದು ದಿನ ಜಯ ಸಿಕ್ಕೇ ಸಿಗುತ್ತದೆ.
ರಾಜ್ಯ 28 ವಿಧಾನಸಭಾ ಕ್ಷೇತ್ರದಿಂದಲೂ ಕಾರ್ಯಕರ್ತರಿಗೆ ಆಹ್ವಾನ ನೀಡಿ ಚರ್ಚಿಸಿ, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಥಾನ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಸಭೆ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕುಮಾರಸ್ವಾಮಿ ಮೂವರು ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದ್ದೇನೆಯೇ ಹೊರತು ಮತ್ತೆ ಯಾವುದೇ ಷರತ್ತು ವಿಧಿಸಿಲ್ಲ ಎಂದರು.
ಜೆಡಿಎಸ್ ಕಚೇರಿಗೆ ಶಂಕುಸ್ಥಾಪನೆ
ಇದೇ ತಿಂಗಳಲ್ಲಿ ಜೆಡಿಎಸ್ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡಕ್ಕೆ ಜೆ.ಪಿ.ನಾರಾಯಣ ಭವನವೆಂದು ನಾಮಕರಣ ಮಾಡಲಾಗುವುದು ಎಂದ ಅವರು, ದೇವೇಗೌಡರಿಗೆ ವಯಸ್ಸಾಯಿತು. ಮೊಮ್ಮಕ್ಕಳ ಜೊತೆ ಆಟವಾಡಿಕೊಂಡು ಇರಬಾರದೆ ಎಂದು ಕೆಲವರು ಅಪಹಾಸ್ಯ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಮತ್ತೆ ಪಕ್ಷವನ್ನು ರಾಜ್ಯಮಟ್ಟದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನ, ಪಕ್ಷ ಬೆಳೆಸಲು ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು.
ಗೆದ್ದಿದ್ದು ಹದಿನಾಲ್ಕೇ ಇರಬಹುದು. ಆದರೆ, ಸುದ್ದಿ ಎಲ್ಲ ನಮ್ಮ ಬಗ್ಗೆಯೇ. ಯಾರ ಪ್ರಭಾವ ಎಷ್ಟೆಂಬುದು ಇದರಲ್ಲೇ ಗೊತ್ತಾಗುತ್ತಿದೆ.
- ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಟ