ಬೆಂಗಳೂರು: ನಗರದ ಪುರಭವನದ ಮುಂದೆ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದ ಬುಲೆಟ್ ಪ್ರಕಾಶ್ ಸೇರಿದಂತೆ ಯುವ ಬಿಜೆಪಿ ಮುಖಂಡರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ, ಆಡಳಿತ ಅಧಿಕಾರ ತಪ್ಪುವ ಸಾಧ್ಯತೆ ಎಂದು ಭಾವಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಶುಕ್ರವಾರ ಬಿಜೆಪಿ ಯುವ ಕಾರ್ಯಕರ್ತರು ನಗರದ ಪುರಭವನದ ಮುಂದೆ ಪ್ರತಿಭಟನೆ ಕೈಗೊಂಡಿದ್ದರು.
ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಬುಲೆಟ್ ಪ್ರಕಾಶ್ ಸೇರಿ ಯುವ ಬಿಜೆಪಿ ಮುಖಂಡರ ಸಹಿತ ಸುಮಾರು 30 ಮಂದಿ ಬಂಧಿಸಿದ್ದಾರೆ.
ಯುವ ಬಿಜೆಪಿಯ ರಾಜ್ಯಾಧ್ಯಕ್ಷ ಮುನಿರಾಜು ಮತ್ತು ಕಾರ್ಯದರ್ಶಿ ರವೀಂದ್ರ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಸುಮಾರು 30ಕ್ಕೂ ಅಧಿಕ ಯುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದುದಕ್ಕೆ ರಾಜ್ಯಾಧ್ಯಕ್ಷ ಮುನಿರಾಜು ಹಾಗೂ ಕಾರ್ಯದರ್ಶಿ ರವೀಂದ್ರ ರೆಡ್ಡಿ ಕೂಡ ಬಂಧಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.