ರಾಜಕೀಯ

ಕಾಂಗ್ರೆಸ್ ಗೆ ಕಾಡುತ್ತಿದೆ ಆರ್ಥಿಕ ಮುಗ್ಗಟ್ಟು

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವುದರ ಜೊತೆಗೆ ಕಾಂಗ್ರೆಸ್ ಗೆ ಹೊಸ ಸವಾಲೊಂದು ಎದುರಾಗಿದೆ. ಪಕ್ಷ ಸಂಘಟನೆಯೊಂದೆಡೆಯಾದರೆ, ಆರ್ಥಿಕ ಮುಗ್ಗಟ್ಟು ಮತ್ತೊಂದೆಡೆ.
ಕಾಂಗ್ರೆಸ್ ಪಕ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ದೇಣಿಗೆ ಕೊರತೆ ಎದುರಿಸುತ್ತಿದ್ದು ಒಂದು ತಿಂಗಳ ವೇತನವನ್ನು ಪಕ್ಷಕ್ಕಾಗಿ ದೇಣಿಗೆ ನೀಡುವಂತೆ ತನ್ನ ಲೋಕಸಭಾ, ರಾಜ್ಯಸಭಾ ಸಂಸದರಿಗೆ ಮನವಿ ಮಾಡಿದೆ.  ಕಾಂಗ್ರೆಸ್ ನ ಮಾಜಿ ಸಂಸದರು / ಸಚಿವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವಂತೆ ಸೆ.29 ರಂದು ನಡೆದ ದೆಹಲಿ ಕಾಂಗ್ರೆಸ್ ಘಟಕದ ಸಭೆಯಲ್ಲಿ ಪಕ್ಷದ ಖಜಾಂಚಿ ಮೋತಿಲಾಲ್ ವೋರಾ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ನ ಹಿರಿಯ ನಾಯಕ ಪಿಸಿ ಚಾಕೋ, ದೆಹಲಿ ಕಾಂಗ್ರೆಸ್ ಮುಖಂಡ ಅಜಯ್ ಮಕೇನ್ ಅ.1 ರಂದು  ಮಾಜಿ ಸಚಿವರು/ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 2014 ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ.
ಮಹಾರಾಷ್ಟ್ರ, ಹರ್ಯಾಣ, ದೆಹಲಿ, ಜಾರ್ಖಂಡ್, ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣಾ ವೇಳೆಯೇ ಕಾಂಗ್ರೆಸ್ ಗೆ ಹಣಕಾಸಿನ ಕೊರತೆ ಎದುರಾಗಿತ್ತು. ಖಜಾನೆಯನ್ನು ತುಂಬಿಸಲು ದೇಣಿಗೆ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಸಂಸದರಿಗೆ ಒಂದು ತಿಂಗಳ ವೇತನವನ್ನು ಪಕ್ಷಕ್ಕೆ ನೀಡಲು ಆದೇಶಿಸಿದೆ.

SCROLL FOR NEXT