ನವದೆಹಲಿ: ಕರ್ನಾಟಕ ಕಾಂಗ್ರೆಸ್ ಘಟಕದ ಉಸ್ತುವಾರಿ ಮುಖಂಡರಾಗಿದ್ದ ದಿಗ್ವಿಜಯ್ ಸಿಂಗ್ ರನ್ನು ಬದಲಾಯಿಸುವ ಕಾಲ ಸನ್ನಿಹಿತವಾಗಿದ್ದು, ಅವರ ಸ್ಥಾನಕ್ಕೆ ಒಡಿಶಾ ಮೂಲದ ಕಾಂಗ್ರೆಸ್ ಹಿರಿಯ ಮುಖಂಡ ಭಕ್ತ ಚರಣ್ ದಾಸ್ ಅವರನ್ನು ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕರ್ನಾಟಕ ಉಸ್ತುವಾರಿ ಮುಖಂಡ ದಿಗ್ವಿಜಯ್ ಸಿಂಗ್ ರನ್ನು ಬದಲಾಯಿಸುವಂತೆ ಮಾಜಿ ಸಂಸದ ಎಚ್ ವಿಶ್ವನಾಥ್ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಈ ಹಿಂದೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಹೈಕಮಾಂಡ್ ದಿಗ್ವಿಜಯ್ ಸಿಂಗ್ ಅವರ ಬದಲಿಗೆ ಭಕ್ತ ಚರಣ್ ದಾಸ್ ಅವರನ್ನು ನೇಮಕ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಕ್ತ ಚರಣ್ ದಾಸ್ ಅವರನ್ನು ಈಗಾಗಲೇ ಕರ್ನಾಟಕ ಕಾಂಗ್ರೆಸ್ ನ ಉಸ್ತುವಾರಿ ಮುಖಂಡರಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ. ಇನ್ನು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮತದಾನದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಥವಾ ಇದೇ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಕರ್ನಾಟಕ ಉಸ್ತುವಾರಿ ಮುಖಂಡರ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಈ ಹಿಂದೆ ಹಾಲಿ ಕರ್ನಾಟಕ ಕಾಂಗ್ರೆಸ್ ಮೇಲುಸ್ತುವಾರಿ ಮುಖಂಡ ದಿಗ್ವಿಜಯ್ ಸಿಂಗ್ ರನ್ನು ಬದಲಾಯಿಸಬೇಕು ಎಂದು ಹಲವು ರಾಜ್ಯ ಮುಖಂಡರು ಆಗ್ರಹಿಸಿದ್ದರು. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರೋಧಿ ಬಣದ ಮುಖಂಡರು ಈ ಬೇಡಿಕೆ ಮುಂದಿಟ್ಟಿದ್ದು, ದಿಗ್ವಿಜಯ್ ಸಿಂಗ್ ಅವರು ಸಿದ್ದರಾಮಯ್ಯ ಅವರ ಪರವಾಗಿ ಪಕ್ಷಪಾತದ ನಿಲುವು ತಳೆದಿದ್ದಾರೆ ಎನ್ನುವ ಆರೋಪಗಳನ್ನು ಮಾಡಿದ್ದರು.
ಒಟ್ಟಾರೆ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೆ ಸಾಬೀತಾಗಿದ್ದು, ಸಚಿವ ಸಂಪುಟ ವಿಸ್ತರಣೆ ಹೊತ್ತಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಕಾದು ನೋಡಬೇಕಿದೆ.