ರಾಜಕೀಯ

ಗೈರಾದ ಶಾಸಕರಿಗೆ ಅನಾರೋಗ್ಯ: ಕುಮಾರ ಸ್ವಾಮಿ ವ್ಯಂಗ್ಯ

Shilpa D

ಮೈಸೂರು: ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಯಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶನಿವಾರ ಮೈಸೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಶಾಸಕಾಂಗ ಸಭೆ ನಡೆಸಿದರು.

ಆದರೆ ಈ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿರುವುದು ಪಕ್ಷದಲ್ಲಿರುವ ಭಿನ್ನಮತವನ್ನು ಬಹಿರಂಗಗೊಳಿಸಿದೆ. ಸಭೆಯಲ್ಲಿ ಶಾಸಕರಾದ ಜಮೀರ್ ಅಹಮದ್, ಚೆಲುವರಾಯಸ್ವಾಮಿ ಹಾಗೂ ಅಖಂಡ ಶ್ರೀನಿವಾಸ್ ಮೂರ್ತಿ ಕಾಣದೆ ಇದ್ದದ್ದು ಕುತೂಹಲ ಮೂಡಿಸಿದೆ. ಶಾಸಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ ಅವರು, ಪೂರ್ವಾನುಮತಿ ಪಡೆದು ಗೈರು ಹಾಜರಾಗಿರುವುದಾಗಿ ಹೇಳಿದ್ದಾರೆ.

ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಗೈರುಹಾಜರಿ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ  ಒಬ್ಬರಿಗೆ ಪೈಲ್ಸ್ ಆಗಿದ್ದರೆ, ಇನ್ನೊಬ್ಬರಿಗೆ 104 ಡಿಗ್ರಿ ಜ್ವರ... ಮಗದೊಬ್ಬರಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದಾರೆ.

ಸಭೆಗೆ ಒಟ್ಟು 10 ಮಂದಿ ಗೈರು ಹಾಜರಾಗಿದ್ದು ಅವರ ಪೈಕಿ ಏಳು ಮಂದಿ ಅನುಮತಿ ಪಡೆದಿದ್ದರು, ಆದರೆ ಮೂವರು ಯಾವುದೇ ಮಾಹಿತಿ ನೀಡಿಲ್ಲ. ಈ ಮೂವರು ಶಾಸಕರು ಜೆಡಿಎಸ್‌ನಿಂದ ಹೊರ ಹೋಗುವುದು ಖಚಿತ ಎನ್ನಲಾಗುತ್ತಿದೆ.

SCROLL FOR NEXT