ಮೈಸೂರು: ಬರಗಾಲ ತಪಾಸಣೆ ಪರಿಹಾರಕ್ಕೆ ಮೊದಲು ಆದ್ಯತೆ ನೀಡಲಾಗಿದ್ದು, ಬರಗಾಲ ತಪಾಸಣೆ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಏಪ್ರಿಲ್ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈಗ ಸಂಪುಟ ವಿಸ್ತರಣೆಯನ್ನು ಕೈಬಿಟ್ಟು, ಬರ ಪ್ರವಾಸ ಪೂರ್ಣಗೊಂಡ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಏಪ್ರಿಲ್ ಅಂತ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆಗೆ ಕಾಯುತ್ತಿದ್ದ ಆಕಾಂಕ್ಷಿಗಳು ಮತ್ತಷ್ಟು ದಿನ ಕಾಯಬೇಕಿದೆ.
ಬರಗಾಲ ತೀವ್ರವಾಗಿರುವುದರಿಂದ ಬರ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಬರ ಪ್ರದೇಶಗಳ ವೀಕ್ಷಣೆ ಮಾಡಿದ ಮೇಲೆ ದೆಹಲಿ ಹೋಗಿ, ಹೈಕಮಾಂಡ್ ನೊಂದಿಗೆ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಚರ್ಚಿಸುವ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮೊದಲ ಹಂತದ ಬರ ಪ್ರವಾಸ ಮುಗಿಸಿದ್ದು, ಏಪ್ರಿಲ್ 25ರಂದು ಎರಡನೇ ಹಂತದ ಪ್ರವಾಸ ಕೈಗೊಳ್ಳಲಿದ್ದು, ಮೇ 2ರಿಂದ ಎರಡು ದಿನಗಳ ಕಾಲ ಇನ್ನುಳಿದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಡಿಸಿ ಎದುರು ರೈತ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಸಿಎಂ, ರೈತರು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗಳಿಗೆ ಯತ್ನಿಸಬಾರದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics