ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್
ಬೆಂಗಳೂರು: ಪಕ್ಷದ ನಿಯಮಗಳನ್ನು ಮೀರಿ ಹೊರಗೆ ಚಟುವಟಿಕೆಗಳನ್ನು ನಡೆಸಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾದೀತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಅಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಮತ್ತು ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಮತ್ತು ಅದರಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ತೊಡಗಿಸಿಕೊಂಡಿರುವುದರ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಪ್ರತಿಕ್ರಿಯೆ ನೀಡಿದರು.
ಪಕ್ಷಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಪಕ್ಷದಿಂದಲೇ ಮಾಡಬೇಕು. ಪಕ್ಷದಿಂದ ಹೊರಗೆ ಏನಾದರೂ ಚಟುವಟಿಕೆ ನಡೆಸಿದರೆ ಅದನ್ನು ನಾವು ಉತ್ತೇಜಿಸುವುದಿಲ್ಲ ಮತ್ತು ಸಹಿಸುವುದು ಕೂಡ ಇಲ್ಲ. ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಶ್ವರಪ್ಪ ಅವರು ಬಿಜೆಪಿಯ ಹಿರಿಯ ನಾಯಕರು. ಅವರಿಗೆ ಪಕ್ಷದ ನಿಯಮ ಅರ್ಥವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಈ ಸಮಸ್ಯೆಯನ್ನು ಅವರು ಬಗೆಹರಿಸಿಕೊಳ್ಳಬಹುದು. ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ಒಬಿಸಿ ಮೋರ್ಚಾವಿದೆ. ಅದರ ಹೊರತಾಗಿ ಬಿಜೆಪಿ ಇತರ ಸಂಘಟನೆಗಳನ್ನು ಬೆಂಬಲಿಸುವುದಿಲ್ಲ ಎಂದು ಮುರಳೀಧರ ರಾವ್ ಸ್ಪಷ್ಟಪಡಿಸಿದರು.
ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಸಭೆಯಲ್ಲಿ ಭಾಗವಹಿಸಲಿರುವ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಕೇಳಿದ್ದಕ್ಕೆ, ಈಶ್ವರಪ್ಪ ಅವರು ಭಾಗವಹಿಸುತ್ತಾರೆಯೇ, ಇಲ್ಲವೇ ನೋಡಬೇಕು ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಘೋಷಿಸಲಾಗಿದೆ. ಅವರು ರಾಜ್ಯಾಧ್ಯಕ್ಷರು ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ನಾಯಕರು ಎಂದು ಮುರಳೀಧರ ರಾವ್ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos