ಬೆಂಗಳೂರು: ನಿರೀಕ್ಷೆಯಂತೆ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಜತೆಗೆ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ 11 ಮಂದಿ ಸದಸ್ಯರ ಹೊಸ ಕೋರ್ ಕಮಿಟಿ ಸಹ ರಚಿಸಲಾಗಿದೆ.
ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆಯಲಿರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಕುಮಾರಸ್ವಾಮಿ ಅವರೇ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಅವರಿಗೆ ಕಾರ್ಯಾಧ್ಯಕ್ಷರಾಗಿ ಬಸವರಾಜ ಹೊರಟ್ಟಿ ಸಾಥ್ ನೀಡಲಿದ್ದಾರೆ. ರಾಷ್ಟ್ರೀಯ ಪರಿಷತ್‌ಗೆ 74 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಕುಮಾರಸ್ವಾಮಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಅವಿರೋಧ ಆಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕಾರ್ಯವೈಖರಿಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ''ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ರೈತರು ಬೆಳೆ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದರೂ ಅವರ ನೆರವಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡಲಾಗುವುದು'' ಎಂದು ಭರವಸೆ ನೀಡಿದರು.