ರಾಯಚೂರು: ತಮ್ಮ ಪಕ್ಷದ ಬಗ್ಗೆ ನಂಬಿಕೆ ಇಲ್ಲದಿದ್ದರೇ ಜೆಡಿಎಸ್ ನಿಂದ ಆಯ್ಕೆಯಾದ ಶಾಸಕರು, ಪಕ್ಷದ ವಿರುದ್ಧ ನಡೆದುಕೊಳ್ಳುವವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ದೇವದುರ್ಗದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಇಲ್ಲದೆ ಇದ್ದರೆ ಇಂದು ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮಜಾ ಮಾಡುತ್ತಿದೆ. ಮಜಾ ಮಾಡುವುದು ಮುಂದುವರಿಸಿದರೆ ಮುಂದಿನ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವ ಬಗ್ಗೆ ಜೆಡಿಎಸ್ ಮರುಪರಿಶೀಲನೆ ನಡೆಸಲಿದೆ ಎಂದು ಎಂದು ಎಚ್ ಡಿ ಕೆ ಎಚ್ಚರಿಸಿದ್ದಾರೆ.
ಜೆಡಿಎಸ್ ಈ ಹಿಂದೆ ಕಾಂಗ್ರೆಸ್‌ನ ಮರ್ಯಾದೆ ಉಳಿಸಿದೆ. ಬಿಜೆಪಿಯವರು ಕಾರ್ಪೊರೇಷನ್ ಚುನಾವಣೆಯಲ್ಲಿ ಗೆದ್ದಿದ್ದರಾದರೂ ಇವತ್ತು ಕಾಂಗ್ರೆಸ್ ಮೇಯರ್‌ಗಿರಿ ಅನುಭವಿಸುತ್ತಿರುವುದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮರ್ಯಾದೆ ಉಳಿಸಿದ್ದು ಜೆಡಿಎಸ್ ಎನ್ನುವುದು ಸಚಿವ ಮಹಾದೇವಪ್ಪ ಅವರಿಗೆ ನೆನಪಿರಲಿ ಎಂದರು.
ರೈತರ ಜೀವದ ಜೊತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚೆಲ್ಲಾಟವಾಡುತ್ತಿವೆ. ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆಯಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಜನ ಮಂತ್ರಿಗಳನ್ನು ಪ್ರಚಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ ಬರ ಪರಿಸ್ಥಿತಿಯ ಅದ್ಯಯನಕ್ಕೆ ಒಬ್ಬ ಸಚಿವರನ್ನೂ ಕಳುಹಿಸಿಕೊಡಲಿಲ್ಲ ಎಂದು ಹರಿಹಾಯ್ದರು.