ಬೀದರ್: ರಾಜಕೀಯವಾಗಿ ಜೆಡಿಎಸ್‌ನಿಂದಲೇ ಬೆಳೆದ ಸಿದ್ದರಾಮಯ್ಯ ಅವರು ಈಗ ಅದೇ ಪಕ್ಷವನ್ನು ಟೀಕಿಸುತ್ತಿರುವುದು ಜನ್ಮಕೊಟ್ಟ ತಾಯಿಯನ್ನು ಅವಹೇಳನ ಮಾಡಿದಂತೆ ಆಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಕಾರಣ. ಜೆಡಿಎಸ್‌ನಲ್ಲಿ ಇದ್ದುಕೊಂಡು ಬೆಳೆದವರು ಈಗ ಅದೇ ಪಕ್ಷವನ್ನು ಟೀಕಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಟೀಕೆ ಮಾಡಿದ ಮೇಲೆಯೇ ಅವರು ಬೆಲೆಬಾಳುವ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಅವರು ಹಾಕಿಕೊಂಡಿರುವ ವಾಚ್ 50 ಲಕ್ಷಕ್ಕಿಂತ ಕಡಿಮೆ ಇಲ್ಲ. ಬೆಲೆಬಾಳುವ ವಸ್ತುಗಳನ್ನು ಧರಿಸಿ, ಬಿಸಿಲಲ್ಲಿ ಕೊಡೆ ಹಿಡಿದುಕೊಂಡು ರ್‌್ಯಾಲಿ ನಡೆಸುವ ಇವರು ಬಡವರ, ರೈತರ ಪರವಾಗಿ ಇರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.
ಜಾತ್ಯತೀತ ಜನತಾ ದಳದವರಿಗೆ ಮದುವೆ ಊಟಕ್ಕಿಂತ ತಿಥಿ ಊಟವೇ ಹೆಚ್ಚು ಇಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಾವು ತಿಥಿ ಊಟ ಮಾಡುತ್ತಿಲ್ಲ. ಸರ್ಕಾರ ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಹಣ ಕೊಡದೆ ಸತಾಯಿಸುತ್ತಿದೆ. ಸಿದ್ದರಾಮಯ್ಯ ರೈತರ ತಿಥಿ ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ’ ಎಂದು ಮಾರುತ್ತರ ನೀಡಿದರು.
ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗಿನ ವಿಕೃತ ಭಾವನೆಗಳನ್ನು ಈಗ ಹೊರಗೆ ಹಾಕುತ್ತಿದ್ದಾರೆ. ಪಕ್ಷದ ತಿಥಿ ಮಾಡಲು ಅವಕಾಶ ಕಲ್ಪಿಸಲಿಲ್ಲ ಎನ್ನುವ ಕಾರಣಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ 4,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದು ಸಾವಿರ ರೈತರ ಆತ್ಮಹತ್ಯೆ ನೋಡಿ ಸಂಭ್ರಮ ಪಡುತ್ತಿದ್ದಾರೆ ಎಂದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಚಿವರನ್ನು ಕಳಿಸಿಕೊಟ್ಟಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಈಗ ಚುನಾವಣಾ ಪ್ರಚಾರಕ್ಕಾಗಿ ಜಾತಿಗೊಂದರಂತೆ ಐವರು ಸಚಿವರನ್ನು ನೇಮಕ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.