ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಅನಿರೀಕ್ಷಿತ ಪೆಟ್ಟು ತಿಂದು ಗಾಯಗೊಂಡ ಹುಲಿಯಂತಾಗಿರುವ ಬಿಜೆಪಿ ಪೆಬ್ರವರಿಯಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಈಗಿನಿಂದಲೇ ಸಜ್ಜಾಗಿದೆ.
ಪರಿಷತ್ ಚುನಾವಣೆಯಲ್ಲಿ ನಿರೀಕ್ಷೆಯ ಗುರಿ ಮುಟ್ಟದ ಬಿಜೆಪಿ, ಮುಂಬರುವ ಜಿಪಂ, ತಾ ಪಂ ಚುನಾವಣೆಯನ್ನು ಹೇಗೆ ಎದುರಿಸೀತು ಎಂಬ ಕುತೂ ಹಲ ಸಾಮಾನ್ಯ. ಇದಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಡಕ್ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. `ಯಾವುದೇ ಒಂದು ಚುನಾವಣೆಯಲ್ಲಿ ಗೆದ್ದೆವೆಂದು ನಾವು(ಬಿಜೆಪಿ) ಅಲ್ಲೇ ಸಂಭ್ರಮಿಸುತ್ತಾ ಕೂರುವುದಿಲ್ಲ, ಅದೇ ರೀತಿ ಚುನಾವಣೆಯಲ್ಲಿ ಸೋಲಾಯಿತೆಂದು ಅಳುತ್ತಾ ಕೂರುವುದಿಲ್ಲ. ಬಿಬಿಎಂಪಿಯಲ್ಲಿ ಗೆದ್ದೆವು, ಪರಿಷತ್-ನಲ್ಲಿ ನಿರೀಕ್ಷೆ ಈಡೇರಲಿಲ್ಲ. ಚುನಾವಣೆ ಎಂದರೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇರುವ ಅವಕಾಶ ಭಾವಿಸುತ್ತೆವೆ ಹೊರತು ಇದೇ ಎಂಡ್ ಪಾಯಿಂಟ್ ಅಲ್ಲ.
ಮುಂದಿನ ಚುನಾವಣೆಗೆ ಸರಿಯಾದ ರೀತಿಯಲ್ಲಿ ತಯಾರಿ ಆರಂಭಿಸುತ್ತಿದ್ದೇವೆ...' ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಜ, ಬಿಜೆಪಿಯು ಪರಿಷತ್ ಸೋಲನ್ನು ಬದಿಗಿಟ್ಟು ಮುಂಬರುವ ತಾ.ಪಂ. ಜಿ.ಪಂ. ಚುನಾವಣೆಗೆ ತಯಾರಿ ನಡೆಸಲಾರಂಭಿಸಿದೆ. ಈಗಾಗಲೇ ಕಳೆದ ಒಂದು ತಿಂಗಳ ಹಿಂದಿನಿಂದಲೇ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಪಕ್ಷದೊಳಗೆ ಚರ್ಚೆಗಳು ನಡೆದಿವೆ. ಆದರೆ, ಡಿಸೆಂಬರ್ 27ರವರೆಗೆ ಅಭ್ಯರ್ಥಿಗಳ ವಿಚಾರದಲ್ಲಿ ಯಾರೂ ಚರ್ಚೆ ನಡೆಸಬಾರದೆಂಬ ಕಟ್ಟುಪಾಡನ್ನು ಪಕ್ಷವೇ ಹಾಕಿಕೊಂಡಿತ್ತು.
ಮುಂದಿನ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳಿಸುವ ಮೂಲಕ ಆಡಳಿತ ಪಕ್ಷಕ್ಕೆ ಪ್ರತ್ಯುತ್ತರ ನೀಡಬೇಕೆಂದು ಸೂಕ್ಷ್ಮಾಮತಿಸೂಕ್ಷ್ಮ ತಂತ್ರಗಾರಿಕೆ ಹೆಣೆಯುವುದಕ್ಕೆ ಪ್ರಯತ್ನ ಆರಂಭವಾಗಿದೆ. ಮೊದಲ ಹಂತದಲ್ಲಿ ರಾಜ್ಯಮಟ್ಟದ ನಾಯಕರ ಸಭೆ ಜ.4ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಸಾಮಂತರ ನೇಮಕ:ಚುನಾವಣೆ ನಿರ್ವಹಣೆ ಗಾಗಿಯೇ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸುವ ಸಂಬಂಧ ಸೋಮವಾರದ ಸಭೆ ಮಹತ್ವ ಪಡೆದುಕೊಂಡಿದೆ. ಅದೇ ರೀತಿ ಪ್ರಣಾಳಿಕೆ ರಚನೆ ಸಂಬಂಧ ಪ್ರತ್ಯೇತ ತಂಡ ರಚನೆಯಲ್ಲದೇ ಎದುರಾಗುವ ಸಮಸ್ಯೆ, ಸವಾಲುಗಳನ್ನು ನಿಭಾಯಿಸುವುದಕ್ಕಾಗಿಯೇ ವ್ಯವಸ್ಥೆ ರೂಪಿಸುವ ಕುರಿತಂತೆ ಸಭೆಯಲ್ಲಿ ತೀರ್ಮಾವಾಗುತ್ತದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್ ಯಡಿ-ಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಪ್ರಮುಖ ನಾಯಕರು, ರಾಜ್ಯ ಪದಾಧಿಕಾರಿಗಳು ಸಭೆಯಲ್ಲಿದ್ದು ಚುನಾವಣೆ ಎದುರಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಪದೇ ಪದೇ ಅಹಿಂದ ಕಾರ್ಡ್ ಪ್ರಯೋಗಿಸುತ್ತಿರುವುದನ್ನು ಅರಿತ ಬಿಜೆಪಿಯು ತಾನೇನು ಕಡಿಮೆ ಎಂಬಂತೆ ತಳಮಟ್ಟದಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ತಂತ್ರ ರೂಪಿಸಲು ಮುಂದಾಗಿದೆ. ಅದೇ ರೀತಿ ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲು ಆಸಕ್ತಿ ತೋರಿಸಿದೆ.
ಅಗತ್ಯ ಸಂಪನ್ಮೂಲ ನಮ್ಮಿಂದ ಸಾಧ್ಯವಾಗಲಿಲ್ಲ
ನಮ್ಮದು ಕೇಡರ್ ಬೇಸ್ ಸಂಘಟನೆ. ಸಂಘಟನೆ ಬಲವಾಗಿದೆ ಎಂದರೆ ಅದು ನಮ್ಮ ಪಕ್ಷದಲ್ಲಿ ಮಾತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪಕ್ಷವು, ವಿಧಾನಪರಿಷತ್ ಸೋಲಿನ ಬಗ್ಗೆ ತನ್ನದೇ ವ್ಯಾಖ್ಯಾನ ಮಾಡುತ್ತದೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡಷ್ಟು ಅಗತ್ಯವಾದ ಸಂಪನ್ಮೂಲ ನಮ್ಮಿಂದ ಸಾಧ್ಯವಾಗಲಿಲ್ಲ. ಅದೂ ಕೊನೆಯ ನಾಲ್ಕು ದಿನದಲ್ಲಿ ಕಾಂಗ್ರೆಸ್ ಬಳಸಿದ ಸಂಪನ್ಮೂಲದಿಂದಾಗಿ ಹಾಸನ, ಚಿತ್ರದುರ್ಗ, ರಾಯಚೂರಿನಂತಹ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಯಿತು. ಆದರೆ, ಜಿ.ಪಂ., ಜಿ.ಪಂ.ಚುನಾವಣೆ ಹಾಗಲ್ಲ, ಉತ್ತಮ ಅಭ್ಯರ್ಥಿ ಮತ್ತು ಚುನಾವಣೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಗೆಲ್ಲಲು ಸಾಧ್ಯವಿದೆ. ನಾವದನ್ನೇ ಮಾಡುತ್ತೇವೆ ಎಂದು ಪಕ್ಷದ
ಹಿರಿಯರು ಅಭಿಪ್ರಾಯಪಡುತ್ತಾರೆ.