ರಾಜಕೀಯ

ಆರ್ಥಿಕ ಸ್ಥಿತಿ ಶ್ವೇತಪತ್ರಕ್ಕೆ ಯಡಿಯೂರಪ್ಪ ಆಗ್ರಹ

Mainashree

ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಢೀಕರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ರಾಜ್ಯದ ಹಣಕಾಸಿನ ಸ್ಥಿತಿಗತಿ ಕುರಿತ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ `ಕೆಪಿಎನ್' ಛಾಯಾಚಿತ್ರ ಸಂಸ್ಥೆಯ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 8 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಲಾಶಯಗಳು ಬರಿದಾಗಿವೆ, ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲವಿದೆ, ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಲ್ಬಣಗೊಂಡಿದೆ, ಜಾನುವಾರುಗಳಿಗೆ ಮೇವಿಲ್ಲ, ಹಳ್ಳಿಗರು ವಲಸೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಪರಿಹಾರ ಕಂಡುಕೊಳ್ಳಲು ಮುಂದಾಗದೆ ಮುಖ್ಯಮಂತ್ರಿಗಳು ನಿದ್ರೆಯಲ್ಲಿದ್ದಾರೆ ಎಂದು ಟೀಕಿಸಿದರು.

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ 1,540 ಕೋಟಿಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದ್ದರೂ ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿಲ್ಲ. ಅಹಿಂದ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪ.ಜಾ ಮತ್ತು ಪ.ಪಂ. ಗಳಿಗೆ ಮೀಸಲಿರಿಸಿದ ಹಣದಲ್ಲಿ ಶೇ.40ರಷ್ಟು ಹಣ ಖರ್ಚಾಗಿಲ್ಲ. ಅಭಿವೃದ್ದಿ ಕಾರ್ಯಗಳಿಗೆ ಹಣ ಬಿಡುಗಡೆಯಾಗಿಲ್ಲ. ಸಿದ್ದರಾಮಯ್ಯನವರು ಕುಂಭಕರ್ಣ ನಿದ್ರೆಯಿಂದ ಹೊರಬಂದು ಅಧಿಕಾರಿಗಳ ಕಿವಿ ಹಿಂಡಿ ಹಣವನ್ನು ಖರ್ಚು ಮಾಡಿಸಬೇಕು ಎಂದು ಹೇಳಿದರು.

SCROLL FOR NEXT