ಬೆಂಗಳೂರು: ಜಿಪಂ, ತಾಪಂ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ತೋರಬೇಕೆಂಬ ಕಟ್ಟಾಜ್ಞೆ ಕೆಪಿಸಿಸಿ ಅಧ್ಯಕ್ಷರಿಂದ ಪದಾಧಿಕಾರಿಗಳಿಗೆ ರವಾನೆಯಾಯಿತು.
ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ 30 ಜಿಲ್ಲೆಗಳ ಡಿಸಿಸಿ ವರಿಷ್ಠರು ಮತ್ತು ಕೆಪಿಸಿಸಿ ಸದಸ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಹಾಲಿ ಜಿಪಂ, ತಾಪಂ ಸದಸ್ಯರಾಗಿದ್ದುಕೊಂಡು ಹೆಸರು ಕೆಡಿಸಿಕೊಂಡಿರುವ ಅಭ್ಯರ್ಥಿ-ಗಳಿಗೆ ಈ ಬಾರಿ ಟಿಕೆಟ್ ನೀಡಬಾರದು. ಅಂತಹ ಅಭ್ಯರ್ಥಿಗಳನ್ನು ಗುರುತಿಸಬೇಕು. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಡಬೇಕು. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ದೂರವಿಡಬೇಕು. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು.
ಈ ಚುನಾವಣೆಗಳಿಗಾಗಿಯೇ ಪ್ರಣಾಳಿಕೆ ಸಮಿತಿ ರಚಿಸಿ ಅಭಿಪ್ರಾಯ ಪಡೆಯಬೇಕು. ಕ್ಷೇತ್ರ ಬದಲಾವಣೆಯ ನೆಪ ಹೇಳಿ ಬರುವವರನ್ನು ನಿಯಂತ್ರಿಸಿ ಸ್ಥಳೀಯರಿಗೆ ಮನ್ನಣೆ ನೀಡುವವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಕೆಪಿಸಿಸಿ ಸದಸ್ಯ ಜಕ್ಕಪ್ಪ
ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ಮೇಲೆ ನಿಗಾವಹಿಸಲು ರಚಿಸಿದ್ದ ವಿ.ಆರ್.ಸುದರ್ಶನ್ ಸಮಿತಿ ತಯಾರಿಸಿರುವ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನಿಗಮ-ಮಂಡಳಿಗಳಿಗೆ ಸದಸ್ಯರು ಮತ್ತು ನಿರ್ದೇಶಕರನ್ನು ನೇಮಿಸಿದ್ದರೆ ಪಕ್ಷಕ್ಕೆ ಇನ್ನಷ್ಟು ಲಾಭವಾಗುತ್ತಿತ್ತು ಎಂದರು
ಪಿಸಿಸಿ ಕಾರ್ಯದರ್ಶಿ ಜಿ.ಎ. ಬಾವಾ ಮಾತನಾಡಿ, ಕಳೆದ ಚುನಾವಣೆಯಲ್ಲಿ ಚಾಮರಾಜಪೇಟೆಯಿಂದ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿ ವಿರುದ್ದಕೆಲಸ ಮಾಡಿದವರು ಇಂದು ಆಯಕಟ್ಟಿನ ಸ್ಥಾನ ಅಲಂಕರಿಸಿದ್ದಾರೆ. ಹೀಗಾದರೆ ನಿಷ್ಠಾವಂತ ಕಾರ್ಯಕರ್ತರ ಗತಿ ಏನು? ಎಂದು ಚಾಮರಾಜಪೇಟೆ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಹಮ್ಮದ್ ವಿರುದ್ಧ ದೂರು ಸಲ್ಲಿಸಿದರು. ಅಭ್ಯರ್ಥಿ ಆಯ್ಕೆಗೆ ನೇಮಕವಾಗಿರುವ ವೀಕ್ಷಕರು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಯನ್ನು ಕೆಪಿಸಿಸಿಗೆ ಸಲ್ಲಿಸಬೇಕೆಂದು ಪರಮೇಶ್ವರ್ ಕಟ್ಟಾಜ್ಞೆ ಹೊರಡಿಸಿದರು.