ಬೆಂಗಳೂರು: ಶಾಸಕರ ಅಕಾಲಿಕ ಮರಣದಿಂದ ತೆರವಾಗಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ ಅಧಿಸೂಚನೆ ಪ್ರಕಟವಾಗಲಿದೆ. ಬೀದರ್, ಹೆಬ್ಬಾಳ ಮತ್ತು ದೇವದುರ್ಗ ಕ್ಷೇತ್ರಗಳ ಕ್ಷೇತ್ರಗಳಿಗೆ ಫೆ. 13ರಂದು ಚುನಾವಣೆ ನಡೆಯಲಿದ್ದು, ಸ್ಪರ್ಧಾಕಾಂಕ್ಷಿಗಳು ಬುಧವಾರದಿಂದಲೇ ನಾಮಪತ್ರ ಸಲ್ಲಿಸಬಹುದಾಗಿದೆ.
ನಾಮಪತ್ರ ಸಲ್ಲಿಸಲು ಜ. 27 ಕೊನೆ ದಿನವಾಗಿದೆ. ಜ.28 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜನವರಿ 30 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿವೆ.
ಖರ್ಗೆ, ಪರಮೇಶ್ವರ್ ಹೇಳಿಕೆ ಗೊತ್ತಿಲ್ಲ: ಸಿಎಂ
ದಾವಣಗೆರೆ: ವಿಧಾನಸಭೆ ಉಪ ಚುನಾವಣೆಗೆ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬೈರತಿ ಸುರೇಶ್ ಕುರಿತಂತೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್ ಯಾವ ದೃಷ್ಟಿಕೋನದಿಂದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಬೈರತಿ ಅವರು ಪಕ್ಷದ ಸದಸ್ಯರೇ ಅಲ್ಲ ಎಂದಿದ್ದಾರೆನ್ನಲಾದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಬೈರತಿ ಸುರೇಶ್ ಕಾಂಗ್ರೆಸ್‍ನ ಸಹ ಸದಸ್ಯರು. ಲೋಕಸಭೆ, ಬಿಬಿಎಂಪಿ, ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೆಲವಿಗೆ ಶ್ರಮಿಸಿದ್ದಾರೆ. ಬೈರತಿ ಸುರೇಶ್‍ರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿದ್ದೇ ನಾನು. ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಸಾಕಷ್ಟು ಗೊಂದಲವಿದೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಪ್ರತಿಕ್ರಿಯಿಸಿದರು.