ನಂಜನಗೂಡು: ರಾಜ್ಯದ ಹಿರಿಯ ರಾಜಕಾರಣಿ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ರಾಜಕೀಯ ವಿಶ್ರಾಂತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ನಡೆದ ಆದರ್ಶ ವಿದ್ಯಾಲಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 41 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ 5 ಬಾರಿ ಸಂಸದನಾಗಿ, ಕೇಂದ್ರದ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. 2ನೇ ಬಾರಿ ಶಾಸಕನಾಗಿರುವ ನಾನು ಪ್ರಸ್ತುತ ಕಂದಾಯ ಸಚಿವನಾಗಿದ್ದೇನೆ. ಈ ಎಲ್ಲ ಅಧಿಕಾರಗಳು ನಿಮ್ಮೆಲ್ಲರ ಆಶೀರ್ವಾದ-ದಿಂದ ಸಿಕ್ಕಿದ್ದು.
ಮೈಸೂರು, ಚಾಮರಾಜನಗರ ಭಾಗದ ಜನರಿಗೆ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ ಎಂಬ ಹೆಮ್ಮ ಇದೆ. ನಿಮಗೆ ಗೌರವ ಬರುವಂತೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಕೆಲಸ ನಿರ್ವಹಿಸಿರುವ ತೃಪ್ತಿ ನನಗಿದೆ ಎಂದರು. ಈಗ ನನಗೆ ಅನಾರೋಗ್ಯದಿಂದಾಗಿ ವೈದ್ಯರ ಸಲಹೆಮೇರೆಗೆ ನನಗೆ ರಾಜಕೀಯ ವಿಶ್ರಾಂತಿ ಅಗತ್ಯವಿದೆ. ಅತ್ಯಂತ ಚಟುವಟಿಕೆಯುಳ್ಳ ಈ ತಾಲೂಕಿಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಸಂಸದ ಆರ್.ಧ್ರುವನಾರಾಯಣ್ ರಂತಹ ಯುವಕರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ರಾಜಕೀಯ ವಿಶ್ರಾಂತಿ ಪಡೆಯಲು ಇಚ್ಛಿಸಿದ್ದೇನೆ ಎಂದು ಸಭೆಯಲ್ಲಿ ಭಾವುಕರಾಗಿ ನುಡಿದರು.