ಬೆಂಗಳೂರು: ರಾಜ್ಯದಲ್ಲಿ ನಡೆಯುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಜಿಪಂ, ತಾಪಂ ಚುನಾವಣೆಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಗುರುವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಈಗಾಗಲೇ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ನೇಮಿಸಿದ್ದ ವೀಕ್ಷಕರ ತಂಡವು ತಾವು ಅಧ್ಯಯನ ನಡೆಸಿ ತಯಾರಿಸಿರುವ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದೆ. ಸದರಿ ವರದಿಯನ್ನು ಶುಕ್ರವಾರ ದಿಗ್ವಿಜಯ್ ಸಿಂಗ್ ಪರಿಶೀಲಿಸಿ ಸಂಜೆಯ ವೇಳೆಗೆ ದೆಹಲಿಗೆ ವಾಪಸ್ ತೆರಳುವರು. ಇಲ್ಲಿ ಹೈ ಕಮಾಂಡ್ ಗಮನಕ್ಕೆ ತಂದ ಬಳಿಕವಷ್ಟೇ ದೆಹಲಿಯಿಂದಲೇ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವರು. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಿಗ್ವಿಜಯ್ ಸಿಂಗ್ ಗಮನಕ್ಕೆ ತರಲಿದ್ದಾರೆ. ತಾವು ಸೂಚಿಸಿದ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ವಿವರಿಸಿ ಅಂತಿಮ ಪಟ್ಟಿ ಸಿದ್ಧಗೊಳ್ಳಲು ಸಹಕರಿಸುವರು ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ನಾಳೆಯಿಂದ ಪ್ರಚಾರ: ಸದ್ಯ ಮೂರು ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ಪಕ್ಷವು ಜನವರಿ 23 ರಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ಧಮುಕಲಿದೆ.