ರಾಜಕೀಯ

ಕಲಾಪ ಅಡ್ಡಿಪಡಿಸಿದರೆ ಅಧಿವೇಶನ ಮೊಟಕು: ವಿಪಕ್ಷಗಳಿಗೆ ಸಿಎಂ ಎಚ್ಚರಿಕೆ

Manjula VN

ಮೈಸೂರು: ನಿಗದಿತ ದಿನದವರೆಗೂ ರಾಜ್ಯ ವಿಧಾನಮಂಡಲದ ಅಧಿವೇಶನವನ್ನುನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ವಿರೋಧ ಪಕ್ಷಗಳು ಸೋಮವಾರ ಕೂಡ ಕಲಾಪಕ್ಕೆ ಅಡ್ಡಿಪಡಿಸಿದರೆ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿರೋಧ ಪಕ್ಷಗಳು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಗೆ ಕೇವಲ ಪ್ರಚಾರಬೇಕಿದೆ. ರಾಜ್ಯದಲ್ಲಿರುವ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ನಾಯಕರು ಸಿದ್ಧರಿಲ್ಲ. ಸಾರ್ವಜನಿಕರ ಹಣವನ್ನು ಪೋಲು ಮಾಡುವುದು ನನಗೆ ಇಷ್ಟವಿಲ್ಲ. ವಿಪಕ್ಷಗಳು ಕಲಾಪಕ್ಕೆ ಅಡ್ಡಿಯುಂಟು ಮಾಡಿದರೆ, ಅಧಿವೇಶನವನ್ನೇ ಮೊಟಕುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದ ಕೊಲೆಗಡುಕ ಸರ್ಕಾರ ಎಂಬ ಹೇಳಿಕೆ ವಿರುದ್ಧ ಕಿಡಿಕಾರಿರುವ ಅವರು, ವಿಧಾನಮಂಡಲದಿಂದ ಈಶ್ವರಪ್ಪ ಅವರನ್ನು ಕಿತ್ತೊಗೆಯುವಂತೆ ಸ್ಪೀಕರ್ ಬಳಿ ಮನವಿ ಮಾಡಿದ್ದೇನೆ. ಇಂತಹ ಅಸಂವಿಧಾನಿಕ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಂತರ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಸೂಟ್ ಕೇಸ್ ರಾಜಕೀಯ ಎಂಬ ಹೇಳಿಕೆಯ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಆಧಾರವಿಲ್ಲದೆಯೇ ಕುಮಾರಸ್ವಾಮಿಯವರು ಆರೋಪಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಮರೀಗೌಡ ಅವರನ್ನು ಬಂಧಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಪ್ರಶ್ನೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಪೊಲೀಸರು ತಕ್ಕ ಕ್ರಮಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ.

ಮಹಾದಾಯಿ ನೀರು ಯೋಜನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸುವ ಅಗತ್ಯವಿದೆ. ಮೋದಿಯವರು ಮಹಾರಾಷ್ಟ್ರದೊಂದಿಗೆ ಮಾತುಕತೆ ನಡೆಸಬೇಕು. ಗೋವಾ ಮತ್ತು ಕರ್ನಾಟಕದ ನಡುವೆ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT